ಮಡಿಕೇರಿ, ಡಿ. 20: ಕೊಡಗು ಜಿಲ್ಲೆಯ ಕಾಫಿ, ಏಲಕ್ಕಿ, ಭತ್ತ, ತೋಟಗಾರಿಕಾ ಬೆಳೆಗಳ ಸಹಿತ; ಎಲ್ಲ ಬಗೆಯ ಕೃಷಿ ಕಾಯಕಕ್ಕೆ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯು ಉತ್ತೇಜನ ನೀಡುವ ದಾಗಿ, ವಿವಿಯ ಉನ್ನತಮಟ್ಟದ ನಿಯೋಗ ಘೋಷಿಸಿದೆ. ಅಲ್ಲದೆ ಪೊನ್ನಂಪೇಟೆಯ ಅರಣ್ಯ ಮಹಾ ವಿದ್ಯಾಲಯ ಹಾಗೂ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದೊಂದಿಗೆ ಮಡಿಕೇರಿಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಮಗ್ರ ಅಭಿವೃದ್ಧಿಗೆ ಎಲ್ಲ ರೀತಿ ನೆರವಿನ ಭರವಸೆ ನೀಡಿದೆ.ಶಿವಮೊಗ್ಗ ವಿಶ್ವವಿದ್ಯಾನಿಲಯದ ಕುಲ ಸಚಿವ ಡಾ.ಪಿ. ನಾರಾಯಣ ಸ್ವಾಮಿ ಆಡಳಿತ ಮಂಡಳಿ ಸದಸ್ಯರು ಗಳಾದ ಡಾ. ಹೆಚ್.ಎಂ. ಕೃಷ್ಣಮೂರ್ತಿ, ಎಂ.ಹೆಚ್. ಚಂದ್ರಪ್ಪ, ನೀತಾ ಯೋಗಿರಾಜ್ ಪಾಟೀಲ್ ಸಹಿತ ತಾಂತ್ರಿಕ ವಿಭಾಗದ ಅಧಿಕಾರಿಗಳ ತಂಡ ಕೊಡಗಿಗೆ ಭೇಟಿ ನೀಡುವ ದರೊಂದಿಗೆ, ಇತರೆಡೆಗಳಿಗಿಂತ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಪೂರಕ ವಾತಾವರಣವಿದೆ ಎಂದು ನಿಯೋಗ ಪ್ರಮುಖರು ಹೆಮ್ಮೆಯ ನುಡಿಯಾಡಿದರು.‘ಶಕ್ತಿ’ಯೊಂದಿಗೆ ಮಾತನಾಡಿದ ಕುಲ ಸಚಿವ ಡಾ. ನಾರಾಯಣ ಸ್ವಾಮಿ ಅವರು, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಹಾಗೂ ಮಡಿಕೇರಿ ಕೃಷಿ ಸಂಶೋಧನಾ ಕೇಂದ್ರ ಸಹಿತ ಗೋಣಿಕೊಪ್ಪಲು ಕೇಂದ್ರವನ್ನು ಪುನಶ್ಚೇತನಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದರು. ಕೃಷಿ ಸಂಶೋಧನೆಯೊಂದಿಗೆ, ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದಿಂದ ತೊಂದರೆಗೆ ಒಳಗಾಗಿರುವ ಕುಟುಂಬಗಳ ರೈತರಿಗೆ ಉತ್ತೇಜನ ನೀಡಲು ಹಲವು ರೀತಿ ಯೋಜನೆ ಕೈಗೊಂಡಿರುವದಾಗಿ ಮಾಹಿತಿ ನೀಡಿದರು.

ವಿಫುಲ ಅವಕಾಶ : ಮಡಿಕೇರಿ ಕೇಂದ್ರದಲ್ಲಿ ತುಂಗಾ ತಳಿಯ ಭತ್ತದ ಬಿತ್ತನೆ ಬೀಜ ಸಂವರ್ಧನೆಗೊಳಿಸಿ, ಕೃಷಿ ಇಲಾಖೆಯ ಮುಖಾಂತರ ನೇರವಾಗಿ ಅಲ್ಪಮೊತ್ತಕ್ಕೆ ಒದಗಿಸು ವದು, ತೋಟಗಾರಿಕಾ ಬೆಳೆಗಳನ್ನು ಬೆಳೆಯುವದರೊಂದಿಗೆ, ಯಾವದೇ ರಾಸಾಯನಿಕ ಅಥವಾ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದ ತರಕಾರಿಗಳನ್ನು ನೇರ ಮಾರಾಟ ಗೊಳಿಸುವದು, ಸಂತ್ರಸ್ತ ಗ್ರಾಮಗಳ ರೈತರು ಬೆಳೆಯುವ ಸೊಪ್ಪು, ತರಕಾರಿ, ಹಣ್ಣುಗಳಿಗೆ ಮಾರಾಟ ವ್ಯವಸ್ಥೆ ಕಲ್ಪಿಸಲಾಗುವದು ಎಂದರು.

ಆರ್ಥಿಕ ಸ್ವಾವಲಂಬನೆ: ರೈತ ಕುಟುಂಬಗಳು ಆರ್ಥಿಕ ಸ್ವಾವಲಂಬನೆ ಕಂಡುಕೊಳ್ಳುವ ದಿಸೆಯಲ್ಲಿ ಕಾಲ ಕಾಲಕ್ಕೆ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಸಹಿತ ಜೇನು ಕೃಷಿ ತರಬೇತಿ ನೀಡಲಾಗುತ್ತಿದ್ದು, ಗೋಣಿಕೊಪ್ಪಲು ಕೇಂದ್ರದೊಂದಿಗೆ, ಭವಿಷ್ಯದಲ್ಲಿ ಮಡಿಕೇರಿ ಕೇಂದ್ರವನ್ನು ಇನ್ನಷ್ಟು ಪುನಶ್ಚೇತನಗೊಳಿಸಲಾಗುವದು ಎಂದು ಭರವಸೆ ನೀಡಿದರು.

ರಾಜ್ಯದಲ್ಲೇ ಮಾದರಿ : ಯೋಗದ ಸದಸ್ಯ ಡಾ. ಕೃಷ್ಣಮೂರ್ತಿ ಮಾತನಾಡುತ್ತಾ, ತಮ್ಮ ತಂಡ ಸಂದರ್ಶಿಸಿದ ರಾಜ್ಯದ ಇತರೆಡೆಯ ಶಾಖೆಗಳಿಗಿಂತಲೂ

(ಮೊದಲ ಪುಟದಿಂದ) ಪೊನ್ನಂಪೇಟೆ ಅರಣ್ಯ ಕಾಲೇಜು, ಗೋಣಿಕೊಪ್ಪಲು ಹಾಗೂ ಮಡಿಕೇರಿ ಕೇಂದ್ರಗಳ ನಿರ್ವಹಣೆಯು ಕೊಡಗಿನವರೇ ಆಗಿರುವ ಡಾ. ಸಿ.ಜಿ. ಕಿರಣ್‍ಕುಶಾಲಪ್ಪ ನೇತೃತ್ವದಲ್ಲಿ ಮಾದರಿಯಾಗಿದೆ ಎಂದು ಮುಕ್ತವಾಗಿ ಪ್ರಶಂಶಿಸಿದರು. ಕೊಡಗಿನಲ್ಲಿ ರೈತರಿಗೆ ಪೂರಕವಾಗಿ ಎಲ್ಲ ರೀತಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸಲಹೆ ನೀಡಿದ ಅವರು, ಆ ದಿಸೆಯಲ್ಲಿ ಸರಕಾರ ಮತ್ತು ಶಿವಮೊಗ್ಗ ವಿವಿಯಿಂದ ಆರ್ಥಿಕ ನೆರವು ಕಲ್ಪಿಸಲಾಗುವದು ಎಂದರು.

ಜಾಗ ಕಾಪಾಡಬೇಕು : ಮಡಿಕೇರಿ ಸಂಶೋಧನಾ ಕೇಂದ್ರದ ಜಾಗವು ಕೊಡಗಿನ ರೈತರಿಗೆ ಜೀವನಾಡಿ ಯಾಗಿದ್ದು, ಭವಿಷ್ಯದಲ್ಲಿ ಈ ಜಾಗ ಯಾವ ಇಲಾಖೆಗೂ ನೀಡದೆ; ಇರು ವಷ್ಟು ಪ್ರದೇಶವನ್ನು ಉಳಿಸಿಕೊಳ್ಳು ವಂತೆ ತಿಳಿ ಹೇಳಿದರು. ಇಂತಹ ಫಲವತ್ತಾದ ಸಮೃದ್ಧ ಜಲಮೂಲ ದೊಂದಿಗೆ, ಉತ್ತಮ ವಾತಾವರಣ ದಿಂದ ಕೂಡಿರುವ ಜಾಗ ಬೇರೆಲ್ಲೂ ಕಂಡಿಲ್ಲವೆಂದು ಒತ್ತಿ ಹೇಳಿದ ಕೃಷ್ಣಮೂರ್ತಿ, ಭತ್ತ, ಕಾಫಿ, ಏಲಕ್ಕಿ, ಕಾಳುಮೆಣಸು, ಸೊಪ್ಪು, ತರಕಾರಿ ಸಹಿತ ಹಣ್ಣುಗಳನ್ನು ಉತ್ಪಾದನೆ ಮಾಡಲು ರೈತರ ಪ್ರೋತ್ಸಾಹಿಕ ಕೇಂದ್ರ ಇದಾಗಲೆಂದು ಆಶಿಸಿದರು.

ದುರಸ್ತಿಗೆ ನೆರವು : ಪ್ರಸಕ್ತ ನಗರದ ಕೃಷಿ ಸಂಶೋಧನಾ ಕೇಂದ್ರದಲ್ಲಿ ಮಳೆ ಗಾಲ ಹಾನಿಗೊಂಡಿರುವ ‘ಶೇಡ್‍ನೆಟ್’ ಘಟಕಗಳ ದುರಸ್ತಿ ಹಾಗೂ ಇತರ ಕೆಲಸಗಳಿಗೆ ಕ್ರಿಯಾಯೋಜನೆ ರೂಪಿಸಿ ಅಂದಾಜು ಪಟ್ಟಿ ಸಲ್ಲಿಸಲು ಸೂಚಿಸಿದ ಅವರು, ಸರಕಾರ ಮತ್ತು ಶಿವಮೊಗ್ಗ ವಿವಿಯಲ್ಲಿ ರೈತರ ಉತ್ತೇಜನಕ್ಕಾಗಿ ಎಷ್ಟು ಬೇಡಿಕೆ ಸಲ್ಲಿಸಿದರೂ ಹಣ ಒದಗಿಸಲು ಬದ್ಧವೆಂದು ಘೋಷಿಸಿದರು. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಸಿ.ಜಿ. ಕುಶಾಲಪ್ಪ, ಉಪನ್ಯಾಸಕ ಡಾ. ಕೆಂಚೇಗೌಡ, ಅಧಿಕಾರಿಗಳಾದ ಸತೀಶ್, ಅವಿನಾಶ್ ಸೇರಿದಂತೆ ಇತರರು ಹಾಜರಿದ್ದರು.