ಮಡಿಕೇರಿ, ಡಿ. 19: ಭತ್ತ ಖರೀದಿ ಸಂಬಂಧ ಈಗಾಗಲೇ ನೋಂದಣಿ ಪ್ರಕ್ರಿಯೆ ಶುರುವಾಗಿದ್ದು, ರೈತರು ಮತ್ತು ಗಿರಣಿ ಮಾಲೀಕರು ನೋಂದಣಿ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಕೋರಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭತ್ತಕ್ಕೆ ಬೆಂಬಲ ಬೆಲೆ ಮತ್ತು ಖರೀದಿಗೆ ಸಂಬಂಧಿಸಿದಂತೆ ನಡೆದ ಟಾಸ್ಕ್‍ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಭತ್ತ ಖರೀದಿಗೆ ಸಾಕಷ್ಟು ಬೇಡಿಕೆ ಇದೆ. ಈ ಬಗ್ಗೆ ರೈತರು ಮತ್ತು ಅಕ್ಕಿ ಗಿರಣಿ ಮಾಲೀಕರು ಹೆಸರು ನೋಂದಾಯಿಸಿಕೊಳ್ಳುವಂತೆ ಅವರು ತಿಳಿಸಿದರು. ರೈತರು ಮತ್ತು ಗಿರಣಿ ಮಾಲೀಕರು ಭತ್ತ ಖರೀದಿ ಸಂಬಂಧ ಮಡಿಕೇರಿ, ಗೋಣಿಕೊಪ್ಪ, ಕುಶಾಲನಗರ ಎಪಿಎಂಸಿಗಳಲ್ಲಿ ಹೆಸರು ನೋಂದಾಯಿಸುವಂತೆ ಹೇಳಿದರು.
ಆಹಾರ ಇಲಾಖೆ ಉಪ ನಿರ್ದೇಶಕ ಎಸ್. ಸದಾಶಿವಯ್ಯ ಮಾಹಿತಿ ನೀಡಿ, ಜಿಲ್ಲೆಯಲ್ಲಿ 33 ಅಕ್ಕಿ ಗಿರಣಿಗಳಿದ್ದು, ಈವರೆಗೆ ಇಬ್ಬರು ಗಿರಣಿ ಮಾಲೀಕರು ಮಾತ್ರ ಹೆಸರು ನೋಂದಾಯಿಸಿದ್ದಾರೆ. ಹಾಗೆಯೇ 11 ಮಂದಿ ರೈತರು ಮಾತ್ರ ಹೆಸರು ನೋಂದಾಯಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಕನಿಷ್ಟ ಬೆಂಬಲ ಬೆಲೆಯಡಿ ಪ್ರತೀ ಕ್ವಿಂಟಾಲ್ ಭತ್ತಕ್ಕೆ 1750 ರೂ. ನಿಗದಿ ಮಾಡಲಾಗಿದೆ. ಸರ್ಕಾರದ ನಿರ್ದೇಶನದಂತೆ ಅಕ್ಕಿ ಗಿರಣಿ ಮಾಲೀಕರು ಒಂದು ಕ್ವಿಂಟಾಲ್ ಭತ್ತಕ್ಕೆ 67 ಕೆ.ಜಿ. ಅಕ್ಕಿ ನೀಡಬೇಕಿದೆ ಎಂದು ಆಹಾರ ಇಲಾಖೆ ಉಪ ನಿರ್ದೇಶಕರು ತಿಳಿಸಿದರು. ಗಿರಣಿ ಮಾಲೀಕರು ತಮ್ಮ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದರು.