ಕುಶಾಲನಗರ, ಡಿ. 19: ದುಬಾರೆ ಸಾಕಾನೆ ಶಿಬಿರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಮೂಲ ಸೌಲಭ್ಯಗಳ ಕೊರತೆ ಎದುರಾಗುತ್ತಿದೆ. ದಿನನಿತ್ಯ ಶಿಬಿರಕ್ಕೆ ಭೇಟಿ ನೀಡುವ ಪ್ರವಾಸಿಗರ ವಾಹನಕ್ಕೆ ಸಮರ್ಪಕವಾಗಿ ನಿಲುಗಡೆಗೊಳಿಸಲು ಸ್ಥಳಾವಕಾಶದ ಕೊರತೆ ಒಂದೆಡೆಯಾದರೆ ಪ್ರವಾಸಿಗರಿಗೆ ತಮ್ಮ ವಾಹನದಿಂದ ಇಳಿದು ಓಡಾಡುವ ಸಂದರ್ಭ ಅಪಾಯ ಸಂಭವಿಸುವ ಸಾಧ್ಯತೆಗಳು ಕಂಡುಬರುತ್ತಿವೆ.

ವಾಹನ ನಿಲುಗಡೆಗೊಳಿಸಿ ಸಮೀಪದ ಸಾಕಾನೆ ಶಿಬಿರಕ್ಕೆ ತೆರಳುವ ಪ್ರವಾಸಿಗರು ಉದ್ದನೆಯ ಸರದಿ ಸಾಲಿನಲ್ಲಿ ನಿಂತು ನದಿ ದಾಟಲು ಬೋಟ್‍ಗಾಗಿ ಕಾಯುತ್ತಿರುವ ದೃಶ್ಯ ಕಾಣಬಹುದು. ಬಿಸಿಲಿಗೆ ಮೈಯೊಡ್ಡಿ ನಿಲ್ಲುವ ಸಂದರ್ಭ ಮಕ್ಕಳು, ವೃದ್ಧರು ಮಹಿಳೆಯರಿಗೆ ಅನಾನುಕೂಲ ಉಂಟಾಗುತ್ತಿದೆ ಎಂದು ಪ್ರವಾಸಿಗರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಪ್ರಸಕ್ತ ಅರಣ್ಯ ಇಲಾಖೆಗೆ ಒಳಪಟ್ಟ ಎರಡು ಬೋಟ್‍ಗಳು ಪ್ರವಾಸಿಗರನ್ನು ಸಾಕಾನೆ ಶಿಬಿರಕ್ಕೆ ಒಯ್ಯುತ್ತಿದ್ದು ಪ್ರವಾಸಿಗರ ಸಂಖ್ಯೆ ಹೆಚ್ಚಳ ಇರುವ ಸಂದರ್ಭ ಪರದಾಡುವ ಸ್ಥಿತಿ ಉಂಟಾಗುತ್ತದೆ. ಸಾಕಾನೆಗಳ ಚಟುವಟಿಕೆ ವೀಕ್ಷಿಸಲು ಪ್ರವಾಸಿಗರಿಗೆ ಬೆಳಿಗ್ಗೆ 9 ರಿಂದ 11, ಸಂಜೆ 4.30 ರಿಂದ 5.30 ಸಮಯ ನಿಗದಿಪಡಿಸಿದೆ.

ಈ ನಡುವೆ ಕೆಲವು ಪ್ರವಾಸಿಗರು ಬೋಟ್ ಸೌಲಭ್ಯದ ಕೊರತೆಯಿಂದ ಸಾಕಾನೆ ಶಿಬಿರಕ್ಕೆ ನದಿ ದಾಟಿ ತೆರಳುತ್ತಿರುವ ದೃಶ್ಯವೂ ಕಂಡುಬಂದಿದೆ. ಅಪಾಯಕಾರಿ ಕಲ್ಲುಬಂಡೆಗಳ ಮೇಲೆ ಮಕ್ಕಳು, ಮಹಿಳೆಯರು ತೆರಳುತ್ತಿದ್ದು ಜಾರಿ ನದಿಗೆ ಬೀಳುವ ಅಪಾಯವೂ ಎದುರಾಗುತ್ತಿದೆ. ಈ ಹಿನ್ನೆಲೆ ನದಿ ದಾಟಲು ತೂಗುಸೇತುವೆ ಸೌಲಭ್ಯ ಕೂಡಲೇ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

- ಚಂದ್ರಮೋಹನ್