ಮಡಿಕೇರಿ, ಡಿ. 20: ಪ್ರಕೃತಿ ವಿಕೋಪದ ಸಂದರ್ಭ ಬೆಳೆಗಾರರ ಜಮೀನುಗಳಲ್ಲಿದ್ದ ಬೆಲೆ ಬಾಳುವ ಮರಗಳು ಧರೆಗುರುಳಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಈ ಮರಗಳನ್ನು ಹರಾಜು ಮಾಡಿ ಅದರಿಂದ ಬರುವ ಮೊತ್ತವನ್ನು ಸಂತ್ರಸ್ತ ಬೆಳೆಗಾರರಿಗೆ ಹಂಚಿಕೆ ಮಾಡಬೇಕು ಎಂದು ಪ್ರಕೃತಿ ವಿಕೋಪ ಸಂತ್ರಸ್ತರ ಪರಿಹಾರ ಹೋರಾಟ ಸಮಿತಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಎಂ.ಬಿ.ದೇವಯ್ಯ ಅವರು, ಈ ಬೇಡಿಕೆ ಕುರಿತು ಅರಣ್ಯ ಇಲಾಖೆಯ ಗಮನ ಸೆಳೆಯುವ ನಿಟ್ಟಿನಲ್ಲಿ ತಾ. 24ರಂದು ನಗರದ ಅರಣ್ಯ ಭವನ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವ ದಾಗಿ ತಿಳಿಸಿದರು.

ಸಮಿತಿ ಮೂಲಕ ಸರಕಾರ ಹಾಗೂ ಜಿಲ್ಲಾಡಳಿತದ ಗಮನ ಸೆಳೆಯುವ ನಿಟ್ಟಿನಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಜಿಲ್ಲಾಧಿಕಾರಿಗಳು ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವ ಭರವಸೆ ನೀಡಿದ್ದಾರೆ ಎಂದರು.

ಈಗಾಗಲೇ ಪ್ರಕೃತಿ ವಿಕೋಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿರುವ ಜಿಲ್ಲಾಧಿಕಾರಿಗಳು ಭೂ ಕುಸಿತದಿಂದ ರೈತರ ಜಮೀನು ಹಾಗೂ ನದಿಗಳಲ್ಲಿ ತುಂಬಿರುವ ಹೂಳೆತ್ತಲು ಕ್ರಮ ಕೈಗೊಳ್ಳುವ ಭರವಸೆ ದೊರೆತಿದೆ. ಮಾದಾಪುರದಲ್ಲಿ ಮಾತ್ರವಲ್ಲದೆ ಸಂತ್ರಸ್ತರಿಗೆ ಮನೆ ನಿರ್ಮಿಸಲು ಜಿಲ್ಲೆಯ ವಿವಿಧೆಡೆ ಗುರುತಿಸಲಾಗಿರುವ ಜಾಗದಲ್ಲೂ ಏಕ ಕಾಲದಲ್ಲಿ ಮನೆ ನಿರ್ಮಿಸಲು ಕ್ರಮ ವಹಿಸಲಾಗುವದು. ಅಲ್ಲದೆ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸುವವರೆಗೆ ಪರಿಹಾರ ಕೇಂದ್ರಗಳಿಂದ ತೆರವುಗೊಳಿಸುವದಿಲ್ಲ ಎಂಬ ಭರವಸೆಯನ್ನು ನೀಡಿದ್ದಾರೆ ಎಂದು ದೇವಯ್ಯ ಮಾಹಿತಿ ನೀಡಿದರು.

ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ಮನೆ ನಿರ್ಮಿಸಿಕೊಟ್ಟ ಮಾತ್ರಕ್ಕೆ ಪರಿಹಾರ ಕಲ್ಪಿಸಿದಂತಾಗುವದಿಲ್ಲ. ಅವರು ಬದುಕು ಕಟ್ಟಿಕೊಳ್ಳುವವರೆಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಆಸರೆಯಾಗಿ ನಿಲ್ಲಬೇಕಿದೆ.

ಈ ನಿಟ್ಟಿನಲ್ಲಿ ಪ್ರಸಕ್ತ ಅಳಿದುಳಿದಿರುವ ಜಮೀನುಗಳ ಮಣ್ಣು ಪರೀಕ್ಷೆ ನಡೆಸಿ ಆ ಜಮೀನಿನಲ್ಲಿ ಬೆಳೆಯ ಬಹುದಾದ ಬೆಳೆಗಳ ಮಾಹಿತಿ ಒದಗಿಸಬೇಕು. ಅಲ್ಲದೆ ರೈತರಿಗೆ ಅಗತ್ಯವಿರುವ ಬೀಜ ಹಾಗೂ ಗೊಬ್ಬರ ವಿತರಿಸ ಬೇಕು. ಸಂಪೂರ್ಣವಾಗಿ ಆಸ್ತಿಪಾಸ್ತಿ ಕಳೆದು ಕೊಂಡವರಿಗೆ ಕನಿಷ್ಟ 10 ಎಕರೆ ಜಮೀನನ್ನು ಪರ್ಯಾಯ ವಾಗಿ ನೀಡಬೇಕು. ಇದಕ್ಕಾಗಿ ಈಗಾಗಲೇ ಅರಣ್ಯ ಇಲಾಖೆಯಿಂದ ಹಿಂದಕ್ಕೆ ಪಡೆದಿರುವ ಸಿ ಮತ್ತು ಡಿ ವರ್ಗದ ಜಮೀನನ್ನು ಮೀಸಲಿಡಬೇಕು ಎಂದು ಅವರು ಒತ್ತಾಯಿಸಿದರು.

ಬೆಳೆಗಾರರು ತಮ್ಮ ಜಮೀನುಗಳಲ್ಲಿ ಬೆಳೆಸಿದ್ದ ಕೋಟ್ಯಂತರ ರೂ. ಬೆಲೆಬಾಳುವ ಮರಗಳು ಪ್ರಕೃತಿ ವಿಕೋಪದ ಸಂದರ್ಭ ನೆಲಕ್ಕುರುಳಿ ನದಿಗಳಲ್ಲಿ ಕೊಚ್ಚಿ ಹೋಗಿ ಅಲ್ಲಲ್ಲಿ ಶೇಖರಣೆಯಾಗಿವೆ. ಆ ಮರಗಳನ್ನು ತನ್ನದೆಂದು ವಾದಿಸುವ ಮೂಲಕ ಅರಣ್ಯ ಇಲಾಖೆ ಸಾಗಿಸಲು ಯತ್ನಿಸುತ್ತಿದ್ದು, ಇದಕ್ಕೆ ಕೆಲವು ಗ್ರಾಮಗಳಲ್ಲಿ ಸಂತ್ರಸ್ತರು ತಡೆಯೊಡ್ಡಿದ್ದಾರೆ ಎಂದು ಹೇಳಿದ ದೇವಯ್ಯ, ಯಾವದೇ ಕಾರಣಕ್ಕೂ ಈ ಮರಗಳ ಹಕ್ಕು ಅರಣ್ಯ ಇಲಾಖೆಗೆ ಸೇರಿದ್ದಲ್ಲ ಎಂದರು. ಮರಗಳನ್ನು ಹರಾಜು ಮೂಲಕ ವಿಲೇವಾರಿ ಮಾಡಿ ಅದರಿಂದ ಸಂಗ್ರಹವಾಗುವ ಮೊತ್ತವನ್ನು ಸಂತ್ರಸ್ತ ಬೆಳೆಗಾರರಿಗೆ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿ ತಾ. 24ರಂದು ಮಡಿಕೇರಿಯ ಅರಣ್ಯ ಭವನದ ಎದುರು ಸಂತ್ರಸ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದರು.

ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ಕೇಂದ್ರ ಸರಕಾರ ನೀಡುತ್ತಿರುವ ಪರಿಹಾರ ಮೊತ್ತ ಅತ್ಯಲ್ಪವಾಗಿದ್ದು, ಇದನ್ನು ಹೆಚ್ಚಿಸಬೇಕು. ಅಲ್ಲದೆ ಸಂತ್ರಸ್ತರು ಬದುಕು ಕಟ್ಟಿಕೊಳ್ಳಲು ಸುಮಾರು 10 ವರ್ಷಗಳ ಕಾಲಾವಕಾಶ ಬೇಕಾಗಿರುವದರಿಂದ ಅಲ್ಲಿವರೆಗೂ ಬಡ್ಡಿರಹಿತ ಸಾಲವನ್ನು ಸಂತ್ರಸ್ತ ಕೃಷಿಕರು ಮತ್ತು ಬೆಳೆಗಾರರಿಗೆ ನೀಡಬೇಕು. 10 ವರ್ಷದ ಬಳಿಕವೇ ಸಾಲ ಮರುಪಾವತಿಗೆ ವ್ಯವಸ್ಥೆ ಮಾಡಬೇಕು ಎಂದು ದೇವಯ್ಯ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಉಪಾಧ್ಯಕ್ಷರುಗಳಾದ ಎ.ಟಿ.ಮಾದಪ್ಪ, ಅರವಿಂದ ಹಾಗೂ ಪ್ರಧಾನ ಕಾರ್ಯದರ್ಶಿ ಕುಂಬುಗೌಡನ ಪ್ರಸನ್ನ ಉಪಸ್ಥಿತರಿದ್ದರು.