ಸೋಮವಾರಪೇಟೆ, ಡಿ. 20: ಇಲ್ಲಿನ ಕುರುಹಿನ ಶೆಟ್ಟಿ ಸಮಾಜದ ವತಿಯಿಂದ ಶ್ರೀ ರಾಮಮಂದಿರದಲ್ಲಿ 2ನೇ ವರ್ಷದ ವೈಕುಂಠ ಏಕಾದಶಿಯನ್ನು ಭಕ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಏಕಾದಶಿ ಅಂಗವಾಗಿ ವಿಶೇಷ ಅಲಂಕಾರ, ದೇವರ ದರ್ಶನ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯಗಳು ನಡೆದವು. ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನೆರವೇರಿತು.

ಸಂಜೆ ಆರ್ಟ್ ಆಫ್ ಲಿವಿಂಗ್‍ನ ಸೂರ್ಯಪಾದ ಸ್ವಾಮೀಜಿ (ಛಾಯಣ್ಣ) ಅವರ ತಂಡದಿಂದ ಮೂಡಿಬಂದ ಸತ್ಸಂಗ ಕಾರ್ಯಕ್ರಮ, ಭಕ್ತಗಣವನ್ನು ಭಕ್ತಿಯ ಭಾವಲೋಕಕ್ಕೆ ಕರೆಯೊಯ್ಯಿತು. ದೇವರ ನಾಮಸ್ಮರಣೆಯೊಂದಿಗೆ ಆರಂಭವಾದ ಭಕ್ತಿಯ ಗಾನ ಸುಧೆಯಲ್ಲಿ ಆಸ್ತಿಕರು ಮಿಂದೆದ್ದರು.

ಕುರುಹಿನ ಶೆಟ್ಟಿ ಸಮಾಜದ ಅಧ್ಯಕ್ಷ ರಾಮ್‍ಶೆಟ್ಟಿ, ಪ್ರಮುಖರಾದ ಮಂಜುನಾಥ್, ರೇವಣ್ಣ, ಅರ್ಚಕ ಮೋಹನ್‍ಮೂರ್ತಿ, ಬಿ.ಎಂ. ಚಂದ್ರಾಜು, ಹಾಲೇಬೇಲೂರು ನಿರ್ವಾಣಿ ಶೆಟ್ಟಿ, ಬಿ.ಎಸ್. ರಾಜು, ಆರ್ಟ್ ಆಫ್ ಲಿವಿಂಗ್‍ನ ಶಿಕ್ಷಕಿ ರಾಗಿಣಿ, ಮೃತ್ಯುಂಜಯ, ಸುದರ್ಶನ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪಟ್ಟಣ ಪಂಚಾಯಿತಿಯ ನೂತನ ಸದಸ್ಯರಾಗಿ ಆಯ್ಕೆಯಾದ ಬಿ.ಸಿ. ವೆಂಕಟೇಶ್ ಮತ್ತು ಶುಭಕರ್ ಅವರುಗಳನ್ನು ಸಮಿತಿಯ ವತಿಯಿಂದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.