ಮಡಿಕೇರಿ, ಡಿ. 20 : ರೋಟರಿ ಇನ್ನರ್ ವೀಲ್ ಕ್ಲಬ್ ವತಿಯಿಂದ ನಗರದ ರೋಟರಿ ಸಭಾಂಗಣದಲ್ಲಿಂದು ಸಂತ್ರಸ್ತ ಮಹಿಳೆಯರಿಗೆ 20 ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭ ಇನ್ನರ್ ವೀಲ್ ಕ್ಲಬ್‍ನ ಜಿಲ್ಲಾ ಅಧ್ಯಕ್ಷೆ ಡಾ. ಸಾರಿಕಾ ಪ್ರಸಾದ್, ಕಾರ್ಯದರ್ಶಿ ಪುಷ್ಪಾ ಗುರುರಾಜ್, ಮಡಿಕೇರಿ ನಗರ ಅಧ್ಯಕ್ಷ ಲತಾ ಚಂಗಪ್ಪ, ಕಾರ್ಯದರ್ಶಿ ಕಣ್ಣು ದೇವರಾಜ್, ಪದಾಧಿಕಾರಿಗಳಾ ಪೂರ್ಣಿಮಾ ರವಿ, ನಯನ ಅಚ್ಚಪ್ಪ, ರಾಜೇಶ್ವರಿ ಗೌಡ, ಕೊಡಗು ಸೇವಾ ಕೇಂದ್ರದ ತಮ್ಮು ಪೂವಯ್ಯ, ಪ್ರಮೋದ್ ಸೋಮಯ್ಯ ಇತರರಿದ್ದರು.
ಕ್ಲಬ್‍ನಿಂದ ಸಮಾಜಮುಖಿ ಕಾರ್ಯ - ಲತಾ
ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಲಾ ಚಂಗಪ್ಪ ಪ್ರಕೃತಿ ವಿಕೋಪದ ಸಂದರ್ಭ ಕ್ಲಬ್‍ನ ಸದಸ್ಯರುಗಳು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದರು. ಸ್ವಂತ ಹಣದಿಂದ ಸಂತ್ರಸ್ತರಿಗೆ 1.10 ಲಕ್ಷ ರೂ.ವೆಚ್ಚದಲ್ಲಿ 20 ಹೊಲಿಗೆ ಯಂತ್ರ, ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿಗೆ 16,800 ರೂ. ವೆಚ್ಚದಲ್ಲಿ ಒಂದು ವಾಷಿಂಗ್ ಮಿಷನ್ ಹಾಗೂ ಒಂದು ಡ್ರೈಯರ್ ಮಿಷನ್ ನೀಡಲಾಗಿದೆ.
ಅಲ್ಲದೆ, ಸಾಯಿ ಶಂಕರ ವಿದ್ಯಾಸಂಸ್ಥೆಗೆ 21,500 ರೂ.ಗಳ ಡೀಪ್ ಫ್ರೀಸರ್ ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ 25 ಸಾವಿರ ರೂ. ಗಳ ಚೆಕ್ಕ್‍ನ್ನು ನೀಡಲಾಗಿದೆ. ಕಾಲೂರಿನ ಸಿ.ಎಂ.ಪೂಣಚ್ಚ ಎಂಬವರ ಚಿಕಿತ್ಸೆಗಾಗಿ 5 ಸಾವಿರ ರೂ. ಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧ್ಯಕ್ಷರಾದ ಡಾ.ಸಾರಿಕಾ ಪ್ರಸಾದ್ ಮಾತನಾಡಿ, ಇನ್ನರ್ ವೀಲ್ ಸಂಸ್ಥೆ ಬಡತನ ರೇಖೆಗಿಂತ ಕೆಳಗಿನವರಿಗೆ ಸಹಾಯ ಮಾಡಲು ಸ್ಥಾಪಿಸಿರುವ ಸಂಸ್ಥೆಯಾಗಿದೆ. ಇದು ಯುನೈಟೆಡ್ ನೇಷನ್ಸ್ ಎಕಾನಾಮಿಕ್ ಮತ್ತು ಸೋಷಿಯಲ್ ಕೌನ್ಸಿಲ್‍ನ್ನು ಪ್ರತಿನಿಧಿಸುತ್ತಿದ್ದು, ಜಿಲ್ಲೆ 318ರಲ್ಲಿ 43 ಸಂಸ್ಥೆಗಳನ್ನು ಹೊಂದಿದೆ. ಅಲ್ಲದೆ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು ಮೈಸೂರು, ಶಿವಮೊಗ್ಗ, ಚಾಮರಾಜನಗರ ಮತ್ತು ಉಡುಪಿಯಲ್ಲೂ ಶಾಖೆಗಳಿವೆ ಎಂದರು.
ಭಾರತದಲ್ಲಿ ಒಟ್ಟು 27 ಇನ್ನರ್ ವೀಲ್ ಜಿಲ್ಲೆಗಳಿದ್ದು, ಪ್ರತಿ ಜಿಲ್ಲೆಗಳಲ್ಲೂ ಶೈಕ್ಷಣಿಕ, ಉತ್ತಮ ಶಾಲೆ, ಕೃತಕ ಕಾಲುಜೋಡಣೆ, ಆರೋಗ್ಯ ಶಿಬಿರಗಳು, ಪರಿಸರ ಸಂರಕ್ಷಣೆ, ಮಹಿಳಾ ಮತ್ತು ಯುವಜನ ವಿಕಾಸ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡಲಾಗಿದೆ. ಎಲ್ಲಾ ಕಾರ್ಯಕ್ರಮಗಳಿಗಾಗಿ ವರ್ಷಕ್ಕೆ ಒಂದು ಕೋಟಿ ರೂ. ಗಳನ್ನು ವಿನಿಯೋಗಿಸಲಾಗುತ್ತಿದೆ ಎಂದು ತಿಳಿಸಿದರು.
ಮಹಿಳಾ ಸ್ವಯಂ ಸೇವಾ ಸಂಸ್ಥೆಯಾಗಿ 105 ದೇಶಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದು, ದೇಶದಲ್ಲಿ ಸುಮಾರು 1.20 ಲಕ್ಷಕ್ಕೂ ಹೆಚ್ಚು ಸದಸ್ಯರುಗಳನ್ನು ಹೊಂದಿರುವದಾಗಿ ಡಾ.ಸಾರಿಕಾ ಪ್ರಸಾದ್ ಮಾಹಿತಿ ನೀಡಿದರು.