ಮಡಿಕೇರಿ ಡಿ.20 :ಕೊಡಗು ಗೌಡ ವಿದ್ಯಾಸಂಘದಿಂದ 2017-18ನೇ ಸಾಲಿಗೆ ಸಂಬಂಧಿಸಿದಂತೆ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ತಾ.25 ರಂದು ಬೆಳಗ್ಗೆ 10 ಗಂಟೆಗೆ ನಗರದ ಸಂಘದ ಸಭಾಂಗಣದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಘದ ಅಧ್ಯಕ್ಷರಾದ ಹೊಸೂರು ರಮೇಶ್ ಜೋಯಪ್ಪ, ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದಲ್ಲಿ ಅಂದಾಜು 110 ವಿದ್ಯಾರ್ಥಿಗಳನ್ನು ಪುರಸ್ಕರಿಸಲು ಉದ್ದೇಶಿಸಲಾಗಿದೆಯೆಂದು ತಿಳಿಸಿದರು.

ಕಳೆದ ಶೈಕ್ಷಣಿಕ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.90ಕ್ಕೂ ಹೆಚ್ಚಿನ ಅಂಕ ಪಡೆದ ನಗರ ಪ್ರದೇಶದ ವಿದ್ಯಾರ್ಥಿಗಳು, ಶೇ. 85 ಕ್ಕೂ ಹೆಚ್ಚಿನ ಅಂಕ ಪಡೆದ ಗ್ರಾಮೀಣ ವಿದ್ಯಾರ್ಥಿಗಳನ್ನು, ಪಿಯುಸಿಯ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗಗಳಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದ ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳು ಹಾಗೂ ಪದವಿಯ ವಿಜ್ಞಾನ, ಕಲೆ ಮತ್ತು ವಾಣಿಜ್ಯ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸ ಲಾಗುತ್ತದೆಂದು ಮಾಹಿತಿ ನೀಡಿದರು.

ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಸಮಾಜ ಬಾಂಧವರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆಂದು ರಮೇಶ್ ಜೋಯಪ್ಪ ತಿಳಿಸಿದರು.

ಸಮಾರಂಭ: ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭsವನ್ನು ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಕೋಡಿ ಗುರುರಾಜ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ತಾನೇ ವಹಿಸಲಿದ್ದೇನೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಕೊಡಗು ಮತ್ತು ದಕ್ಷಿಣ ಗೌಡ ಸಮಾಜದ ಮಾಜಿ ಅಧ್ಯಕ್ಷರಾದ ಅಮ್ಮವನ ವಾಸು, ನಿವೃತ್ತ ಲೋಕೋಪಯೋಗಿ ನಿವೃತ್ತ ಅಧಿಕಾರಿ ಪರಿವಾರ ಅಪ್ಪಾಜಿ, ಸೋಮವಾರಪೇಟೆ ಕಾಫಿ ಬೆಳೆಗಾರರಾದ ಕುಯ್ಯಮುಡಿ ಸುಲೋಚನ ಅಪ್ಪಾಜಿ, ಬಿಎಸ್‍ಎನ್‍ಎಲ್‍ನ ಸಬ್ ಡಿವಿಜನಲ್ ಇಂಜಿನಿಯರ್ ಹೊಸೂರು ಗೀತಾ ರಮೇಶ್ ಭಾಗವಹಿಸಲಿದ್ದಾರೆಂದು ತಿಳಿಸಿದರು.

ಶೈಕ್ಷಣಿಕ ಪ್ರಗತಿಗೆ ಪರಿಶ್ರಮ-ಕೊಡಗು ಗೌಡ ವಿದ್ಯಾಸಂಘ 1908ರಲ್ಲಿ ಪ್ರಾರಂಭಗೊಂಡಿದ್ದು, ಗೌಡ ಸಮುದಾಯದ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸುವದರೊಂದಿಗೆ ಗ್ರಾಮೀಣ ಹಿನ್ನೆಲೆಯ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಸಮಾಜ ಬಾಂಧವರು ಶೈಕ್ಷಣಿಕವಾಗಿ ಏಳಿಗೆ ಹೊಂದಬೇಕೆಂಬ ಹಂಬಲಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ವಿವಿಧ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ ಎಂದರು.

ಈ ವರ್ಷವು ಪ್ರತಿಭಾ ಪುರಸ್ಕಾರದೊಂದಿಗೆ, ಎಳೆಯರಿಗೆ ಛದ್ಮವೇಷÀ, ಚಿತ್ರಕಲಾ ಸ್ಪರ್ಧೆ, ಸಾಮಾನ್ಯ ಜ್ಞಾನ ಸ್ಪರ್ಧೆ, ಜಾನಪದ ನೃತ್ಯ ಸ್ಪರ್ಧೆ ಹಾಗೂ ಸೋಬಾನೆ ಹಾಡು ಸ್ಪರ್ಧೆ ಆಯೋಜಿಸಲಾಗಿದ್ದು, ಇವುಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಗುವದೆಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ, ಕಾರ್ಯದರ್ಶಿ ಕೊಟ್ಟಗೇರಿಯನ ಡಿ. ದಯಾನಂದ, ತಳೂರು ಕೆ. ದಿನೇಶ್‍ಕುಮಾರ್ ಹಾಗೂ ಕುದುಪಜೆ ಬೋಜಪ್ಪ ಮುತ್ತಣ್ಣ ಉಪಸ್ಥಿತರಿದ್ದರು.