ಶ್ರೀಮಂಗಲ, ಡಿ. 11 : ಶ್ರೀಮಂಗಲ ಹೋಬಳಿ, ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೌರಾಣಿಕ ಹಿನ್ನಲೆಯುಳ್ಳ ಹರಿಹರ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ತಾ. 13 ರ ಗುರುವಾರ ಷಷ್ಠಿ ಹಾಗೂ 14 ರ ಶುಕ್ರವಾರ ದೇವರ ಅವಭೃತ ಸ್ನಾನ ವಿಜೃಂಭಣೆಯಿಂದ ಜರುಗಲಿದೆ.
ಷಷ್ಠಿ ಹಬ್ಬದ ಪ್ರಯುಕ್ತ ತಾ. 4 ರಂದು ಕೊಡಿಮರ ನಿಲ್ಲಿಸುವದರೊಂದಿಗೆ ಆರಂಭವಾದ ಉತ್ಸವದಲ್ಲಿ ತಾ. 13 ರ ಗುರುವಾರ ಹಾಗೂ 14 ರ ಶುಕ್ರವಾರ ಪೂರ್ವಾಹ್ನ 7 ಗಂಟೆಯಿಂದ ರುದ್ರಾಭಿಷೇಕ, ಕ್ಷೀರಾಭಿಷೇಕ, ಕುಂಕುಮಾರ್ಚನೆ, ಶೇಷ ಪೂಜೆ, ನಾಗ ಪೂಜೆ, ಮಂಗಳಾರತಿ, ಮಹಾಪೂಜೆ ಸೇರಿದಂತೆ ಹಲವು ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ . ಎರಡು ದಿನವೂ ಪೂರ್ವಾಹ್ನ 7 ಗಂಟೆಯಿಂದ ತಲೆಮುಡಿ, ತುಲಾಭಾರ ಹಾಗೂ ವಿವಿಧ ಹರಕೆ ಒಪ್ಪಿಸುವ ಕಾರ್ಯ ನಡೆಯಲಿದೆ.
ತಾ. 13 ರಂದು ಸಂಜೆ 5 ಗಂಟೆಗೆ ದೇವರ ದರ್ಶನ, ನೃತ್ಯ, 14 ರಂದು ಸಂಜೆ 5 ಗಂಟೆಯಿಂದ ದೇವರ ದರ್ಶನ, ಅವಭೃತ ಸ್ನಾನ ಹಾಗೂ ದೇವರ ನೃತ್ಯ ನಡೆಯಲಿದೆ. ಎರಡು ದಿನವೂ ಭಕ್ತಾಧಿಗಳಿಗೆ ಅನ್ನದಾನವಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ತಕ್ಕ ಮುಖ್ಯಸ್ಥರು ಹಾಗೂ ದೇವಸ್ಥಾನ ಆಡಳಿತ ಮಂಡಳಿ ಕೋರಿದೆ.