ಸೋಮವಾರಪೇಟೆ, ಡಿ. 12: ಸಿರಿ ಧಾನ್ಯಗಳನ್ನು ನಿಯಮಿತವಾಗಿ ಬಳಸುವದರಿಂದ ದೈಹಿಕ ಆರೋಗ್ಯ ಹೆಚ್ಚುವದರೊಂದಿಗೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿರಿ ಸಂಸ್ಥೆಯ ಮೇಲ್ವಿಚಾರಕ ಹರೀಶ್ ಹೇಳಿದರು.

ಎಸ್‍ಕೆಡಿಆರ್‍ಡಿಪಿ ಮತ್ತು ಸಿರಿ ಗ್ರಾಮೋದ್ಯೋಗ ಸಂಸ್ಥೆ ವತಿಯಿಂದ ತಣ್ಣೀರುಹಳ್ಳ ಒಕ್ಕೂಟದ ಸದಸ್ಯರಿಗೆ ಆಯೋಜಿಸಲಾಗಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಿರಿ ಧಾನ್ಯಗಳಲ್ಲಿ ಅಧಿಕ ಪೋಷಕಾಂಶ ಮತ್ತು ನಾರಿನಾಂಶವಿದ್ದು, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರೊಂದಿಗೆ ಮಧುಮೇಹ, ಥೈರಾಯ್ಡ್, ಅಸ್ತಮಾ, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳ ವಿರುದ್ಧ ಹೋರಾಡುವಲ್ಲಿ ಸಹಕಾರಿಯಾಗಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ರೂಪಾ ಸತೀಶ್ ವಹಿಸಿದ್ದರು. ಯೋಜನೆಯ ವಲಯ ಮೇಲ್ವಿಚಾರಕ ರಮೇಶ್, ಸೇವಾ ಪ್ರತಿನಿಧಿ ಶೈಲಾ, ಪಂಚಾಯಿತಿ ಸದಸ್ಯರಾದ ಜಯಂತಿ, ರೂಪಾ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.