ಮಡಿಕೇರಿ ಡಿ.12 : ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಕುಟುಂಬಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ತಳೆದಿರುವ ವಿಳಂಬ ಧೋರಣೆಯನ್ನು ವಿರೋಧಿಸಿ ಡಿ.14ರಂದು ಮಡಿಕೇರಿಯಲ್ಲಿ ಸಂತ್ರಸ್ತರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಪ್ರಕೃತಿ ವಿಕೋಪ ಪರಿಹಾರ ಹೋರಾಟ ಸಮಿತಿ ಘೋಷಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಎಂ.ಬಿ.ದೇವಯ್ಯ ಅವರು, ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸುವದರೊಂದಿಗೆ ಇತರ ಪರಿಹಾರ ಕಾರ್ಯಕ್ರಮಗಳನ್ನೂ ರೂಪಿಸಬೇಕೆಂದು ಸಮಿತಿ ಒತ್ತಾಯಿಸು ತ್ತಲೇ ಬಂದಿದ್ದು, ಈ ಸಂಬಂಧವಾಗಿ ಜಿಲ್ಲಾಡಳಿತ, ಸರಕಾರ ಹಾಗೂ ಸ್ವತಃ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಪ್ರಕೃತಿ ವಿಕೋಪ ಸಂಭವಿಸಿ ನಾಲ್ಕು ತಿಂಗಳುಗಳಾಗು ತ್ತಿದ್ದರೂ, ಸರಕಾರ ಮನೆ ನಿವೇಶನಕ್ಕೆ ಜಾಗ ಗುರುತಿಸುವದು, ಮನೆ ನಿರ್ಮಿಸಿ ಕೊಡುವದನ್ನು ಬಿಟ್ಟು ಇತರ ಯಾವದೇ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಂಡಿಲ್ಲ ಎಂದು ಆರೋಪಿಸಿದರು.

ಪ್ರಕೃತಿ ವಿಕೋಪ ಸಂಭವಿಸಿದ ಪ್ರದೇಶಗಳ ನದಿಗಳಲ್ಲಿ ಹಾಗೂ ಜಮೀನುಗಳಲ್ಲಿ ತುಂಬಿರುವ ಹೂಳೆತ್ತುವದು, ಸಂತ್ರಸ್ತರಾದವರ ಮನೆಗಳಿಗೆ ರಸ್ತೆ ನಿರ್ಮಿಸುವದು, ಮಕ್ಕಳ ವಿದ್ಯಾಭ್ಯಾಸಕ್ಕೆ ಸೂಕ್ತ ವ್ಯವಸ್ಥೆ ಮಾಡುವದು ಸೇರಿದಂತೆ ಆದ್ಯತೆಯ ಕಾರ್ಯಕ್ರಮಗಳ ಬಗ್ಗೆ ಸರಕಾರ ಇಂದಿಗೂ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದ ಅವರು, ನದಿಗಳಲ್ಲಿ ಹೂಳು ತುಂಬಿರುವ ವಿಚಾರಕ್ಕೆ ಸರಕಾರದ ಗಮನಕ್ಕೇ ಬಂದಿಲ್ಲ ಎಂಬ ಹೇಳಿಕೆಯನ್ನು ಜಲಸಂಪನ್ಮೂಲ ಸಚಿವರು ಸದನದಲ್ಲಿ ನೀಡಿರುವದನ್ನು ಗಮನಿಸಿದರೆ ನಾಗರಿಕ ಸಮಾಜದಲ್ಲಿ ಜವಾಬ್ದಾರಿಯುತ ಸರಕಾರಗಳು ನಡೆದುಕೊಳ್ಳುವ ರೀತಿ ಯಾವ ಮಟ್ಟದಲ್ಲಿದೆ ಎಂಬುದು ಅರಿವಾಗುತ್ತಿದೆ ಎಂದು ಟೀಕಿಸಿದರು.

ಮುಂದಿನ ಏಪ್ರಿಲ್-ಮೇ ತಿಂಗಳುಗಳಲ್ಲಿ 3-4 ಮಳೆಯಾದರೆ ಪ್ರಕೃತಿ ವಿಕೋಪ ಸಂಭವಿಸಿದ ಪ್ರದೇಶಗಳಲ್ಲಿ ಪ್ರಸಕ್ತ ಉಳಿದುಕೊಂಡಿ ರುವ ಗ್ರಾಮಸ್ಥರು ಗ್ರಾಮವನ್ನೇ ತೊರೆಯಬೇಕಾದ ಪರಿಸ್ಥಿತಿ ಇದೆ ಎಂದು ದೇವಯ್ಯ ಆತಂಕ ವ್ಯಕ್ತಪಡಿಸಿದರು.

ಸಮಿತಿಯ ಗೌರವಾಧ್ಯಕ್ಷ ರವಿಕುಶಾಲಪ್ಪ ಅವರು ಮಾತನಾಡಿ, ಹಾಗೂ ಪ್ರಮುಖ ಬಾಲಚಂದ್ರ ಕಳಗಿ ಇವರುಗಳು ಮಾತನಾಡಿ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದ್ದು, ಅಧಿಕಾರಿಗಳು ತಾವು ಮಾತ್ರ ಎಲ್ಲಾ ಪರಿಹಾರ ಕಾರ್ಯ ಗಳನ್ನು ಮಾಡಬಹುದೆಂಬ ಭ್ರಮೆಯ ಲ್ಲಿದ್ದಾರೆ. ಆದರೆ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದಲ್ಲಿ ಅವರಿಗೆ ಸಮಸ್ಯೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಡಿ.14 ಪ್ರತಿಭಟನೆಯ ಬಳಿಕವೂ ಸಂತ್ರಸ್ತರ ಪರಿಹಾರ ಕಾರ್ಯಗಳು ಚುರುಕುಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂತ್ರಸ್ತರೆಲ್ಲರೂ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಿರುವದಾಗಿ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿ ಯಲ್ಲಿ ಸಮಿತಿ ಕಾರ್ಯದರ್ಶಿ ಕುಂಬು ಗೌಡನ ಪ್ರಸನ್ನ ಹಾಗೂ ಅರವಿಂದ್ ಸುರೇಂದ್ರ ಉಪಸ್ಥಿತರಿದ್ದರು.