ಭಾಗಮಂಡಲ, ಡಿ. 12: ಜೀವನದಿ, ಕೊಡಗಿನ ಕುಲಮಾತೆ ಕಾವೇರಿಯ ಉಗಮಸ್ಥಳ ತಲಕಾವೇರಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಅಭಿವೃದ್ಧಿ ಸಂಬಂಧ ಹಮ್ಮಿಕೊಂಡಿದ್ದ ದೇವತಾ ಕೈಂಕರ್ಯಗಳು ಇಂದು ಸಂಪನ್ನಗೊಂಡಿತು. ನೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಋತ್ವಿಜರು ವಿಧಿ- ವಿಧಾನಗಳನ್ನು ನೆರವೇರಿಸಿದರು.

ತಲಕಾವೇರಿ ಕ್ಷೇತ್ರದಲ್ಲಿ ಇಂದು ಬೆಳಿಗ್ಗೆಯಿಂದ ಗಣಪತಿ ಹೋಮ ಹಾಗೂ ಪೂಜಾ ಕೈಂಕರ್ಯಗಳೊಂದಿಗೆ ಮಧ್ಯಾಹ್ನ 12.47 ಗಂಟೆಗೆ ಶ್ರವಣ ನಕ್ಷತ್ರ, ಮೀನಾಲಗ್ನದಲ್ಲಿ ದೇವರಿಗೆ ಭಾಲಾಲಯ ಪ್ರತಿಷ್ಠೆ, ಜೀವಕಲಶಾಭಿಷೇಕ ನೆರವೇರಿತು. ಆ ಬಳಿಕ ಮಹಾಪೂಜೆಯೊಂದಿಗೆ ತೀರ್ಥ ಪ್ರಸಾದದೊಂದಿಗೆ ಸದ್ಭಕ್ತರಿಗೆ ಅನ್ನ ಸಂತರ್ಪಣೆ ಜರುಗಿತು.

ಅಲ್ಲದೆ ಇಂದಿನಿಂದ ತಾ.14ರ ತನಕ ತಂತ್ರಿಗಳ ಮಾರ್ಗದರ್ಶನದಲ್ಲಿ ಭಾಗಮಂಡಲ ಕ್ಷೇತ್ರದಲ್ಲಿ ವಾರ್ಷಿಕ ಪ್ರತಿಷ್ಠಾಪನಾ ಪೂಜೆ ಕೈಂಕರ್ಯಗಳೊಂದಿಗೆ ತಾ. 13ರಂದು (ಇಂದು) ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ವಿಶೇಷ ಪೂಜಾಧಿಗಳು ನಡೆಯಲಿದೆ ಎಂದು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ತಿಳಿಸಿದ್ದಾರೆ.

ಇಂದಿನ ಎಲ್ಲಾ ಕೈಂಕರ್ಯಗಳಲ್ಲಿ ಉಭಯ ಕ್ಷೇತ್ರಗಳ ಅರ್ಚಕರು, ಕುಟುಂಬಸ್ಥರು, ತಕ್ಕಮುಖ್ಯಸ್ಥರು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು.