ಗೋಣಿಕೊಪ್ಪ ವರದಿ, ಡಿ. 11: ವಿದ್ಯೆಯಿಂದಲೇ ಹೆಚ್ಚು ಅಭಿವೃದ್ಧಿ ಕಂಡಿರುವ ಬ್ರಾಹ್ಮಣರಿಂದ ವಿದ್ಯೆಯನ್ನು ಪೋಷಿಸುವ ಕೆಲಸ ಮತ್ತಷ್ಟು ಹೆಚ್ಚಾಗಬೇಕಿದೆ ಎಂದು ಹಿರಿಯ ಸಾಹಿತಿ ನಾಗೇಶ್ ಕಾಲೂರು ಅಭಿಪ್ರಾಯಪಟ್ಟರು.

ಕೈಕೇರಿಯಲ್ಲಿರುವ ಬ್ರಾಹ್ಮಣದ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು. ಬ್ರಾಹ್ಮಣರು ವಿದ್ಯೆಯಿಂದಲೇ ಹೆಚ್ಚು ಅಭಿವೃದ್ಧಿ ಕಂಡವರು. ವಿದ್ಯೆಯನ್ನು ಕಾಯುವ ಜವಬ್ದಾರಿಯನ್ನು ಬ್ಯಾಹ್ಮಣರಿಗೆ ಸನಾತನ ಧರ್ಮ ನೀಡಿದೆ. ಇದನ್ನು ಮನಗಂಡು ವಿದ್ಯೆಯನ್ನು ಪೋಷಿಸುವ ಕೆಲಸ ಬ್ರಾಹ್ಮಣ ಜನಾಂಗದಿಂದ ನಡೆಯಬೇಕಿದೆ. ಎಂತಹ ಕ್ಲಿಷ್ಠಕರ ಪರಿಸ್ಥಿತಿ ಎದುರಾದರೂ, ವಿದ್ಯೆ ನಮ್ಮನ್ನು ಕಾಪಾಡುತ್ತಿದೆ ಎಂಬ ನಂಬಿಕೆಯನ್ನು ನಾವು ಹೆಚ್ಚಿಸಿಕೊಳ್ಳಬೇಕಿದೆ. ಜಾತಿ ವರ್ಗೀಕರಣದ ಮೂಲಕ ಸಮಾಜದಲ್ಲಿ ತೊಡಗಿಕೊಂಡವರಿಗೆ ತಿಳಿ ಹೇಳುವ ಕೆಲಸ ನಡೆಯಬೇಕು. ಬ್ರಾಹ್ಮಣರು ಬಹುಜನ ಪ್ರಿಯರು ಎಂಬುವದನ್ನು ಸಮಾಜಕ್ಕೆ ತಿಳಿಸಿಕೊಡುವ ಪ್ರಯತ್ನ ಆಗಬೇಕು ಎಂದರು.

ಕೊಡವ ಜನಾಂಗದ ಮನೆಯಲ್ಲಿ ನಡೆಯುವ ಸಹಭೋಜನ ಸಂದರ್ಭ ಮನೆಯ ಯಜಮಾನ ಮೊದಲು ಮನೆ ಕಾಯುವ ಶ್ವಾನಕ್ಕೆ ತುತ್ತು ಅನ್ನ ಇಡುವ ಪದ್ದತಿ ಈಗಲೂ ಇದೆ. ಇದು ಅವರಲ್ಲಿನ ವಿಶೇಷತೆಯಲ್ಲಿ ಒಂದಾಗಿದೆ ಎಂದರು. ದುರ್ಗಾ ಸಂಗೀತ ಶಾಲೆ ವಿದ್ಯಾರ್ಥಿಗಳು ಪ್ರಾರ್ಥನಾಗೀತೆ ನಡೆಸಿಕೊಟ್ಟರು. ಸಂಘದ ಮಾಜಿ ಅಧ್ಯಕ್ಷ ಪ್ರಭಾಕರ್ ನೆಲಿತ್ತಾಯ ಪ್ರಾಸ್ತಾವಿಕ ಭಾಷಣ ಮಾಡಿ, ಜನಾಂಗದ ಅಭಿವೃದ್ಧಿ, ಒಗ್ಗಟ್ಟು ಹೆಚ್ಚಿಸುವ ಬಗ್ಗೆ ಸಲಹೆ ನೀಡಿದರು. ಖಜಾಂಜಿ ಪಿ.ಎನ್. ಯೋಗೇಶ್ ವರದಿ ವಾಚಿಸಿದರು. ಸಂಘಕ್ಕೆ ಉತ್ತಮ ಸೇವೆ ಸಲ್ಲಿಸಿದ ಅಧ್ಯಕ್ಷ ಕೃಷ್ಣಮೂರ್ತಿ, ಪ್ರಮುಖರುಗಳಾದ ಯೋಗೇಶ್, ಎ. ವಿ. ಪ್ರಕಾಶ್, ಕೆ.ಕೆ. ಕೃಷ್ಣ, ಯಶೋಧಕೃಷ್ಣ, ಪದತ್ತಾಯಿ, ಪ್ರಭಾಕರ್ ನೆಲ್ಲಿತ್ತಾಯ, ಬಿ.ಎನ್. ಬಾಲಕೃಷ್ಣ, ಪಿ. ಜಿ. ದಿವಾಕರ್, ಶಾರದಮಣಿ ಇವರುಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಟಿ.ಎಸ್. ಕೃಷ್ಣಮೂರ್ತಿ, ಕಾರ್ಯ ದರ್ಶಿ ಸದಾನಂದ ಪುರೋಹಿತ, ಪ್ರಮುಖರುಗಳಾದ ಶಾರದಾಮಣಿ, ವಿಷ್ಣುಮೂರ್ತಿ ಇತರರು ಇದ್ದರು. -ಸುದ್ದಿಪುತ್ರ