ಗೋಣಿಕೊಪ್ಪ ವರದಿ, ಡಿ. 12 : ಮಾಸ್ಟರ್ಸ್ ಹಾಕಿ ಕಪ್‍ನ್ನು ವೀರಾಜಪೇಟೆ ಕಾವೇರಿ ಕಾಲೇಜು ತಂಡವು ಗೆದ್ದುಕೊಳ್ಳುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಫೈನಲ್‍ನಲ್ಲಿ ಸೋಲನುಭವಿಸಿದ ಕಳೆದ ಬಾರಿಯ ಚಾಂಪಿಯನ್ ಅತಿಥೇಯ ಕಾಲ್ಸ್ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಅಶ್ವಿನಿ ಸ್ಪೋಟ್ರ್ಸ್ ಫೌಂಡೇಶನ್, ಕರುಂಬಯ್ಯಾಸ್ ಅಕಾಡೆಮಿ ಹಾಗೂ ಹಾಕಿಕೂರ್ಗ್ ಸಹಯೋಗದಲ್ಲಿ ನಡೆದ 17 ವರ್ಷದೊಳಗಿನ ಇನ್ವಿಟೇಷನ್ ಮಾಸ್ಟರ್ಸ್ ಹಾಕಿ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಕಾವೇರಿ ಕಾಲೇಜು ತಂಡವು ಕಾಲ್ಸ್ ತಂಡವನ್ನು 2-0 ಗೋಲುಗಳ ಅಂತರದಿಂದ ಮಣಿಸಿ ಕಪ್ ಗೆದ್ದುಕೊಂಡಿತು. 40 ಹಾಗೂ 46 ನೇ ನಿಮಿಷಗಳಲ್ಲಿ ಕಾವೇರಿ ಕಾಲೇಜು ಪರ ಬೆಳ್ಯಪ್ಪ 2 ಗೋಲು ಹೊಡೆದು ಗೆಲುವಿನಲ್ಲಿ ಮುಖ್ಯಪಾತ್ರವಹಿಸಿದರು. ಅಲ್ಲಿವರೆಗೆ ನೀರಸವಾಗಿ ನಡೆಯುತ್ತಿದ್ದ ಪಂದ್ಯಕ್ಕೆ ಚೇತರಿಕೆ ಮೂಡಿಸಿದರು.

ಅತಿಥೇಯ ಕಾಲ್ಸ್ ತಂಡಕ್ಕೆ ದೊರೆತ 10 ಪೆನಾಲ್ಟಿ ಕಾರ್ನರ್‍ಗಳು ಗೋಲಾಗಿ ಪರಿವರ್ತಿಸಲು ಸಾಧ್ಯವಾಗದೆ, ಕೈಗೆ ಬಂದ ತುತ್ತು ಬಾಯಿಗೆ ಬಾರಲಿಲ್ಲ ಎಂಬಂತಾಯಿತು. ಎರಡು ಅವಧಿಗಳಲ್ಲಿ ತಲಾ 5 ಪೆನಾಲ್ಟಿ ಕಾರ್ನರ್‍ಗಳು ಕಾಲ್ಸ್ ತಂಡಕ್ಕೆ ದೊರೆತಿತ್ತು. ತಂಡದ ಬ್ಯಾಕ್ ಆಟಗಾರರು ಉತ್ತಮ ಆಟ ಪ್ರದರ್ಶಿಸಿದರು. ಕಾವೇರಿ ಕಾಲೇಜು ತಂಡಕ್ಕೆ 2 ಪೆನಾಲ್ಟಿ ಕಾರ್ನರ್ ದೊರೆಯಿತು.

ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ವೀರಾಜಪೇಟೆ ಕಾವೇರಿ ಕಾಲೇಜು ತಂಡದ ಸೋಮಣ್ಣ, ಕಾಲ್ಸ್ ತಂಡದ ಆಟಗಾರ ದಿಶಾನ್ ಕಾರ್ಯಪ್ಪ ಅವರಿಗೆ ಬೆಸ್ಟ್ ಡಿಫೆಂಡರ್ ಪ್ರಶಸ್ತಿ ದೊರೆಯಿತು. ವೀರಾಜಪೇಟೆ ಕಾವೇರಿ ಕಾಲೇಜು ತಂಡದ ನಾಣಯ್ಯ ಅವರಿಗೆ ಬೆಸ್ಟ್ ಮಿಡ್‍ಫೀಲ್ಡರ್ ಪ್ರಶಸ್ತಿ, ಕಾಲ್ಸ್ ತಂಡದ ಕುಶಾಲಪ್ಪಗೆ ಬೆಸ್ಟ್ ಸ್ಟ್ರೈಕರ್ ಪ್ರಶಸ್ತಿ ನೀಡಲಾಯಿತು.

ಟೂರ್ನಿ ನಿರ್ದೇಶಕರಾಗಿ ನೆಲ್ಲಮಕ್ಕಡ ಪವನ್, ತೀರ್ಪುಗಾರರುಗಳಾಗಿ ಆಕಾಶ್, ಕುಪ್ಪಂಡ ದಿಲನ್, ತಾಂತ್ರಿಕ ವರ್ಗದಲ್ಲಿ ಮುತ್ತಪ್ಪ, ಪಳಂಗಪ್ಪ, ಹರಿಣಾಕ್ಷಿ ಕಾರ್ಯನಿರ್ವಹಿಸಿದರು. ಚೆಪ್ಪುಡೀರ ಕಾರ್ಯಪ್ಪ ವೀಕ್ಷಕ ವಿವರಣೆ ನೀಡಿದರು.

ಸಮಾರೋಪದಲ್ಲಿ ಹಾಕಿ ಇಂಡಿಯಾ ಉಪಾಧ್ಯಕ್ಷೆ ಗಾಯತ್ರಿ ಶೆಟ್ಟಿ ಬಹುಮಾನ ವಿತರಿಸಿ ಮಾತನಾಡಿ, ಶಾಲಾ ಮಟ್ಟದಲ್ಲಿ ಹಾಕಿಯಲ್ಲಿ ಅವಕಾಶ ದೊರೆಯುತ್ತಿರುವದು ಭವಿಷ್ಯದಲ್ಲಿ ಕೊಡಗಿನಿಂದ ಮತ್ತಷ್ಟು ಆಟಗಾರರು ಭಾರತ ಪರ ಆಟವಾಡುವ ನೀರೀಕ್ಷೆ ಮೂಡಿಸಿದೆ. ಹೆಚ್ಚಿನ ಆಟಗಾರರು ದೇಶದ ತರಬೇತಿ ಕೇಂದ್ರಕ್ಕೆ ಬರುವಂತಾಗಬೇಕು. ಕೊಡಗಿನಲ್ಲಿ ಸಾಕಷ್ಟು ಪ್ರತಿಭೆಗಳು ಭಾರತ ತಂಡವನ್ನು ಪ್ರತಿನಿಧಿಸುವಂತಾಗಬೇಕು ಎಂದರು.

ಈ ಸಂದರ್ಭ ಅಶ್ವಿನಿ ಸ್ಪೋಟ್ರ್ಸ್ ಫೌಂಡೇಶನ್ ಮುಖ್ಯಸ್ಥೆ ಅಶ್ವಿನಿ ನಾಚಪ್ಪ, ಕಾಲ್ಸ್ ಮುಖ್ಯಸ್ಥ ದತ್ತಾ ಕರುಂಬಯ್ಯ, ಲಾರೆನ್ಸ್ ಶಾಲೆ ಟ್ರಸ್ಟಿ ಪುಷ್ಪಾ ಸುಬ್ಬಯ್ಯ, ವೃತ್ತ ನಿರೀಕ್ಷಕ ದಿವಾಕರ್ ಪಾಲ್ಗೊಂಡಿದ್ದರು. - ಸುದ್ದಿಪುತ್ರ