ಮಡಿಕೇರಿ, ಡಿ. 12: ಕೊಡಗಿನ ವೀರ ಸೇನಾನಿ ಫೀ.ಮಾ. ಕೆ.ಎಂ. ಕಾರ್ಯಪ್ಪ ಅವರ ಸಹೋದರಳಿಯ ನಿ. ಲೆ.ಜ. ಬಿದ್ದಂಡ ಸಿ. ನಂದಾ (87) ಅವರು ಇಂದು ಅಪರಾಹ್ನ ನಿಧನ ಹೊಂದಿದರು. ಎರಡೂವರೆ ದಶಕದ ಹಿಂದೆ ಭಾರತ ಸೇನೆಯ ಉನ್ನತ ಹುದ್ದೆಯಿಂದ ನಿವೃತ್ತಿಯೊಂದಿಗೆ ಇಲ್ಲಿನ ಅಬ್ಬಿಫಾಲ್ಸ್ ರಸ್ತೆಯ ಹೆಬ್ಬೆಟ್ಟಗೇರಿಯ ತಮ್ಮ ತೋಟದ ಬಂಗಲೆಯಲ್ಲಿ ಪತ್ನಿ ಲೀಲಾ ನಂದಾ ಅವರೊಂದಿಗೆ ವಿಶ್ರಾಂತ ಜೀವನ ನಡೆಸುತ್ತಿದ್ದ ಅವರು, ಇತ್ತೀಚೆಗೆ ಅನಾರೋಗ್ಯದಿಂದ ಚಿಕಿತ್ಸೆಗೆ ಒಳ ಗಾಗಿದ್ದು, ಎರಡು ದಿನಗಳ ಹಿಂದೆ ಯಷ್ಟೇ ತಮ್ಮ ನಿವಾಸಕ್ಕೆ ವಾಪಸಾಗಿದ್ದರು.ಇಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತೆರಳಿ ಹೆಚ್ಚಿನ ಶುಶ್ರೂಷೆಗಾಗಿ ಮೈಸೂರಿಗೆ ಕರೆದೊಯ್ಯುವ ವೇಳೆ ಕೊನೆಯುಸಿ ರೆಳೆದಿದ್ದಾರೆ. ತಾ. 13 ರಂದು (ಇಂದು) ಮೃತರ ತೋಟದಲ್ಲಿ ಸೇನಾ ಗೌರವದೊಂದಿಗೆ ಅಪರಾಹ್ನ 3 ಗಂಟೆಯ ಬಳಿಕ ಅಂತ್ಯಸಂಸ್ಕಾರ ನೆರವೇರಲಿದೆ.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಸಹೋದರಿ ಬೊಳ್ಳಮ್ಮ

(ಮೊದಲ ಪುಟದಿಂದ) ಹಾಗೂ ಬಿದ್ದಂಡ ಎಸ್. ಚಂಗಪ್ಪ (ನಿವೃತ್ತ ಅರಣ್ಯಾಧಿಕಾರಿ) ಅವರ ಪುತ್ರರಾಗಿದ್ದ ಬಿ.ಸಿ. ನಂದಾ ಅವರು, ಭಾರತೀಯ ಸೇನೆಯಲ್ಲಿ ಉನ್ನತ ಹುದ್ದೆಯಿಂದ ನಿವೃತ್ತಿ ಬಳಿಕ ಕೊಡಗಿನಲ್ಲೇ ನೆಲೆಸಲು ಹಂಬಲಿಸಿದ್ದರು.

ಹೆಬ್ಬೆಟ್ಟಗೇರಿಯ ಬೆಟ್ಟ ಶ್ರೇಣಿಯ ನಡುವೆ ಪ್ರಾಕೃತಿಕ ಸೌಂದರ್ಯದ ಸಿರಿಯ ತಾಣದ ಬಂಗಲೆಯಲ್ಲಿ ಕೊನೆಯ ಉಸಿರಿರುವ ತನಕ ಬಾಳಿದ ಈ ನಿವೃತ್ತ ಸೇನಾಧಿಕಾರಿ ನಂದಾ ಅವರು ಬಂಗಲೆ ಸುತ್ತ ಉತ್ತಮ ಪುಷ್ಪೋದ್ಯಾನದೊಂದಿಗೆ ಔಷಧಿಯುಕ್ತ ಗಿಡಗಳನ್ನು ಬೆಳೆಸಿದ್ದಲ್ಲದೆ, ಅತಿಥಿಯಾಗಿ ತೆರಳಿದವರಿಗೆ ತಾವೇ ಖುದ್ದು ಈ ಸಸ್ಯಗಳನ್ನು ಪರಿಚಯಿಸಿಕೊಡುತ್ತಿದ್ದರು.

ಮೃತರು ಪತ್ನಿ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

ಕಿರುಪರಿಚಯ: ಮಹಾರ್ ರೆಜಿಮೆಂಟ್‍ನಲ್ಲಿ ರಕ್ಷಣಾ ಪಡೆಯಲ್ಲಿದ್ದ ಅವರು ನಾರ್ದರ್ನ್ ಕಮಾಂಡ್‍ನ ಆರ್ಮಿ ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇಂಗ್ಲೆಂಡ್‍ನಲ್ಲಿ ಹೈಯರ್ ಕಮಾಂಡರ್ ಕೋರ್ಸ್ ಮಾಡಿದ್ದ ಬಿ.ಸಿ. ನಂದಾ ಅವರು ಸುಮಾರು 34 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಪಿ.ವಿ.ಎಸ್.ಎಂ., ಎ.ವಿ.ಎಸ್.ಎಂ. ಬಿರುದು ಪಡೆದಿದ್ದ ನಂದಾ ಅವರು ಸಿಯಾಚಿನ್ ಅನ್ನು ಹೆಚ್ಚು ಇಷ್ಟಪಡುತ್ತಿದ್ದರು ಎಂದು ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸುಬ್ಬಯ್ಯ ಅವರು ಸ್ಮರಿಸಿದ್ದಾರೆ. ಸೇವೆಯಲ್ಲಿದ್ದ ಸಂದರ್ಭ ಪತ್ನಿಯೊಂದಿಗೆ ಅಲ್ಲಿಗೆ ತೆರಳುತ್ತಿದ್ದ ಅವರು ಸೈನಿಕರ ಜತೆ ಬೆರೆತು ಚಹಾ ಕುಡಿದು ಅವರ ಸಮಸ್ಯೆ ಆಲಿಸಿ ಪರಿಹರಿಸಲು ಪ್ರಯತ್ನಿಸುತ್ತಿದ್ದರು.

ದೇಶದ ಪ್ರಧಾನಿಯಾಗಿದ್ದ ದಿ. ರಾಜೀವ್ ಗಾಂಧಿ ಅವರು ಓದಿದ್ದ ಡೆಹ್ರಾಡೂನ್ ಶಾಲೆಯಲ್ಲಿ ಇವರು ವ್ಯಾಸಂಗ ಮಾಡಿದ್ದರು. ನಂದಾ ಅವರು ಸ್ಟಾಫ್ ಕಾಲೇಜ್ ಅಧ್ಯಯನವನ್ನು ಕಿಂಬರ್ಲಿಯಲ್ಲಿ ಮಾಡಿದ್ದರು. ಸೇವೆಯ ಸಂದರ್ಭ ಭೂಸೇನೆಯ ಜನರಲ್ ಪದವಿ ಇವರಿಗೆ ಲಭಿಸಬೇಕಿತ್ತಾದರೂ ಕಾರಣಾಂತರಗಳಿಂದ ಸಿಗಲಿಲ್ಲ ಎಂದು ಸುಬ್ಬಯ್ಯ ಸ್ಮರಿಸಿದರು.

ಬಿ.ಸಿ. ನಂದಾ ಅವರ ತಂದೆ ಚಂಗಪ್ಪ ಅಂಡಮಾನ್‍ನಲ್ಲಿ ಚೀಫ್ ಕನ್ಸರ್‍ವೇಟರ್ ಆಫ್ ಫಾರೆಸ್ಟ್ ಆಗಿ ಕರ್ತವ್ಯ ನಿರ್ವಹಿಸಿದ್ದು ಅಲ್ಲಿ ಈಗಲೂ ಇವರ ಹೆಸರು ಪರಿಚಿತವಾಗಿದೆ. ಅವರ ಹೆಸರಿನಲ್ಲಿ ಈಗಲೂ ಚಂಗಪ್ಪವೇ ಎಂಬದು ಇರುವದಾಗಿ ಅವರು ಮಾಹಿತಿ ನೀಡಿದರು.