ಭಾಗಮಂಡಲ, ಡಿ. 12: ಗಡಿಭಾಗ ಕೇರಳದಿಂದ ಜಿಲ್ಲೆಯ ಮೀಸಲು ಅರಣ್ಯದೊಳಗೆ ಬೇಟೆ ಮಾಡಲೆಂದು ಬಂದ ವ್ಯಕ್ತಿಯೋರ್ವರು ಗುಂಡೇಟಿಗೆ ಬಲಿಯಾಗಿರುವ ಘಟನೆ ಸಂಭವಿಸಿದೆ. ಗಡಿಭಾಗ ಮುಂಡ್ರೋಟು ಮೀಸಲು ಅರಣ್ಯದಲ್ಲಿ ಈ ಘಟನೆ ನಡೆದಿದ್ದು, ಕೇರಳದ ಕಣ್ಣೂರಿನ ಜಾರ್ಜ್ (50) ಎಂಬಾತನೇ ಸಾವನ್ನಪ್ಪಿದ ದುರ್ದೈವಿ.ನೆರೆಯ ಕೇರಳದ ಕಣ್ಣೂರು ಜಿಲ್ಲೆಯ ಮೀನಂಚೇರಿ - ತೈಯ್ಯಣಿ ಎಂಬಲ್ಲಿನ ನಿವಾಸಿಗಳಾದ ಚಂದ್ರನ್, ಅಶೋಕನ್ ಹಾಗೂ ಜಾರ್ಜ್ ಎಂಬವರುಗಳು ಭಾಗಮಂಡಲ ಗ್ರಾ.ಪಂ. ವ್ಯಾಪ್ತಿಯ ಚೇರಂಗಾಲದ ಮುಂಡ್ರೋಟು ಮೀಸಲು ಅರಣ್ಯಕ್ಕೆ ನಿನ್ನೆ ಸಂಜೆ ಪ್ರಾಣಿ ಬೇಟೆಗೆಂದು ಬಂದಿದ್ದಾರೆ. ರಸ್ತೆ ಬದಿಯಿಂದ ಅರಣ್ಯದೊಳಗೆ ಸುಮಾರು 5 ಕಿ.ಮೀ. ದೂರಕ್ಕೆ ತೆರಳಿದ್ದಾರೆ. ಕಾಡಿನೊಳಗೆ ಜಾರ್ಜ್,
(ಮೊದಲ ಪುಟದಿಂದ) ಚಂದ್ರನ್ ಹಾಗೂ ಅಶೋಕನ್ ಅವರಿಗಿಂತ ಸ್ವಲ್ಪ ಮುಂದೆ ನಡೆಯುತ್ತಿದ್ದರೆನ್ನಲಾಗಿದೆ.
ಸ್ವಲ್ಪ ದೂರ ಹೋಗುತ್ತಿದ್ದಂತೆ ಗುಂಡಿನ ಸದ್ದು ಕೇಳಿಸಿದೆ. ಹಿಂದಿದ್ದವರು ಬಂದು ನೋಡುವಷ್ಟರಲ್ಲಿ ಜಾರ್ಜ್ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿರುವದು ಗೋಚರಿಸಿದೆ. ಗಾಬರಿಗೊಳಗಾದ ಚಂದ್ರನ್ ಹಾಗೂ ಅಶೋಕನ್ ಅವರುಗಳು ಒಡನೆ ಭಾಗಮಂಡಲ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ನಿನ್ನೆ ಸಂಜೆ 4.30ರ ವೇಳೆಗೆ ಈ ಘಟನೆ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ, ಮಹಜರು ನಡೆಸಿ ಮೃತದೇಹವನ್ನು ಕಣ್ಣೂರಿನ ಪೆರಿಯಾರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ. ಇಂದು ವೃತ್ತ ನಿರೀಕ್ಷಕ ಸಿದ್ದಯ್ಯ, ಠಾಣಾಧಿಕಾರಿ ವೆಂಕಟರಮಣ, ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ, ಪರಿಶೀಲನೆ ಮಾಡಿದ್ದಾರೆ. ಮೃತರ ಪತ್ನಿ ಸೋಷಿಯಮ್ಮ ನೀಡಿದ ದೂರಿನ ಮೇರೆಗೆ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬೇಟೆಗೆ ಜೊತೆಯಲ್ಲಿ ತೆರಳಿದ್ದ ಜಾರ್ಜ್ನ ಸಹಚರರಿಂದಲೂ ಹೇಳಿಕೆ ಪಡೆದುಕೊಂಡಿದ್ದಾರೆ. ಮೃತ ಜಾರ್ಜ್ ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಚಂದ್ರನ್ ಹಾಗೂ ಅಶೋಕನ್ ಹೇಳಿಕೆಯಲ್ಲಿ ಗೊಂದಲವಿದ್ದು, ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆಯ ಬಳಿಕವಷ್ಟೆ ಸತ್ಯಾಂಶ ಹೊರಬೀಳಬೇಕಿದೆ.