ಗೋಣಿಕೊಪ್ಪ ವರದಿ, ಡಿ. 11: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನೀಡುವ ರಾಜ್ಯ ಮಟ್ಟದ ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿಗೆ ಭಾಜನರಾದ ನಾಣಚ್ಚಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಚೇಂದೀರ ಕಾವೇರಮ್ಮ ಸುಬ್ಬಯ್ಯ ಅವರಿಗೆ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪೊನ್ನಂಪೇಟೆ ಗ್ರಾ.ಪಂ. ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲೂಕು ಅಧಿಕಾರಿ ಸೀತಾಲಕ್ಷ್ಮಿ ಹಾಗೂ ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತ್ರ ಅವರಿಂದ ಸ್ವೀಕರಿಸಿದರು.
ಈ ಸಂದರ್ಭ 2015-16, 16-17ನೇ ಸಾಲಿನಲ್ಲಿ ಕ್ರಮವಾಗಿ ಉತ್ತಮ ಕಾರ್ಯಕರ್ತೆ ರಾಜ್ಯ ಪ್ರಶಸ್ತಿ ಪಡೆದ ಗೋಣಿಕೊಪ್ಪ ಕೇಂದ್ರದ ಗಿರಿಜಾ, ಸಿದ್ದಾಪುರ ಕಾರ್ಯಕರ್ತೆ ವಾಯಿದಾಖಾನ್, ಕ್ರೀಡೆಯಲ್ಲಿ ಸಾಧನೆ ಮಾಡಿದ ನಾಂಗಾಲ ಕೇಂದ್ರದ ಕಾರ್ಯಕರ್ತೆ ಚೇಮೀರ ಸೀತಮ್ಮ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಸುಮಿತ್ರಾ ಉಪಸ್ಥಿತರಿದ್ದರು.