ವೀರಾಜಪೇಟೆ, ಡಿ. 12: ದಕ್ಷಿಣ ಕೊಡಗಿನ ವಿವಿಧೆಡೆಗಳಲ್ಲಿ ಅಧಿಕಾರಿಗಳು ಗುರುತಿಸಿರುವ ಪೈಸಾರಿ ಭೂಮಿಯ ನಿವೇಶನಗಳ ದಾಖಲೆಗಳನ್ನು ಪರಿಶೀಲಿಸಿ ದಲಿತ ಸಂಘರ್ಷ ಸಮಿತಿಯ ಬೇಡಿಕೆಯಂತೆ ದಲಿತರು, ಕಾರ್ಮಿಕರು, ಬಡ ವರ್ಗದವರು ಹಾಗೂ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ನಿವೇಶನಗಳ ಹಕ್ಕು ಪತ್ರ ಹಂಚಲು ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಮಿತಿಗೆ ಮಡಿಕೇರಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಖುದ್ದು ಭರವಸೆ ನೀಡಿದ್ದಾರೆ ಎಂದು ಸಂಘಟನೆಯ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ತಿಳಿಸಿದ್ದಾರೆ.
ದಲಿತ ಸಂಘರ್ಷ ಸಮಿತಿಯ ಬೇಡಿಕೆಗಳನ್ನು ಕೂಲಂಕಶವಾಗಿ ಪರಿಶೀಲಿಸಿದ ಕುಮಾರಸ್ವಾಮಿ, ಬೇಡಿಕೆಯಂತೆ ನಿವೇಶನಕ್ಕೆ ಆದ್ಯತೆ ನೀಡಲಾಗುವದು. ಹಕ್ಕುಪತ್ರ ವಿತರಣೆಯ ನಂತರ ಶೆಡ್ ಕಟ್ಟಿ ಕೊಳ್ಳಲು ಅನುಮತಿ ನೀಡಲಾಗುವದು. ಆನಂತರ ಸರಕಾರದ ವತಿಯಿಂದಲೇ ನಿಯಮ ಬದ್ಧವಾಗಿ ಮನೆ ಕಟ್ಟಿಕೊಡಲಾಗುವದು. ಮನೆ ಕಟ್ಟಿ ಕೊಡಲು ಸ್ವಲ್ಪ ಸವiಯಾವಕಾಶ ಕೋರಿದರು. ವೀರಾಜಪೇಟೆ ಮಿನಿವಿಧಾನ ಸೌಧದ ಮುಂದೆ ಸಂಘಟನೆಯಿಂದ ನಡೆದ ಐದು ದಿನಗಳ ಧರಣಿ ಮುಷ್ಕರದ ಕುರಿತು ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಲಾಯಿತು ಎಂದು ಸಂಘಟನೆಯ ಪರಶುರಾಮ್ ತಿಳಿಸಿದರು.
ಮಡಿಕೇರಿಯಲ್ಲಿ ಮುಖ್ಯಮಂತ್ರಿ ಭೇಟಿ ಸಂದರ್ಭದಲ್ಲಿ ಸಚಿವರುಗಳಾದ ಜಿ. ಪರಮೇಶ್ವರ್, ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ವಸತಿ ಸಚಿವ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಶ್ರೀವಿದ್ಯಾ, ಐ.ಟಿ.ಡಿ.ಪಿ. ಅಧಿಕಾರಿ ಶಿವ ಕುಮಾರ್, ತಾಲೂಕು ತಹಶೀಲ್ದಾರ್, ಸಮಾಜ ಕಲ್ಯಾಣ ಅಧಿಕಾರಿ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು. ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಮುಖ್ಯಮಂತ್ರಿ ಭೇಟಿಗೆ ಸಂಘಟನೆಯ ಮುಖಂಡರುಗಳಿಗೆ ಅವರ ಭರವಸೆಯಂತೆ ಅವಕಾಶ ಮಾಡಿ ಕೊಟ್ಟರು. ಮುಖ್ಯಮಂತ್ರಿಗಳ ಭರವಸೆಯಂತೆ ಮುಷ್ಕರವನ್ನು ಮುಖ್ಯಮಂತ್ರಿ ಭರವಸೆ ಮೇರೆ ಹದಿನೈದು ದಿನಗಳ ಕಾಲ ಮುಂದೂಡಿರುವದಾಗಿ ಪರಮೇಶ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಭೇಟಿ ಸಂದರ್ಭ ಸಂಘಟನೆಯ ರಾಜ್ಯ ಸಮಿತಿಯ ವಿಭಾಗೀಯ ಸಂಚಾಲಕಿ ಹೆಚ್.ಎಸ್. ಕೃಷ್ಣಪ್ಪ, ಜಿಲ್ಲಾ ಸಮಿತಿಯ ಹೆಚ್.ಎನ್. ಕುಮಾರ್ ಮಹದೇವ್ ಮತ್ತಿತರರು ಉಪಸ್ಥಿತರಿದ್ದರು.