ಬೆಳಗಾವಿ, ಡಿ. 11: ಕೊಡಗು ಜಿಲ್ಲೆಯಲ್ಲಿ ಹಲವು ತಿಂಗಳ ಹಿಂದೆ ಸಂಭವಿಸಿದ ಭೂಕುಸಿತದಂತಹ ಪ್ರಾಕೃತಿಕ ವಿಕೋಪದಿಂದಾಗಿ ನದಿ-ತೋಡುಗಳು ಈ ಹಿಂದೆ ಹರಿಯುತ್ತಿದ್ದ ಮಾರ್ಗವೇ ಬದಲಾಗಿವೆ. ಈ ಮಾರ್ಗಗಳಲ್ಲಿ ಹೂಳು ತುಂಬಿದ್ದು, ಇದನ್ನು ತೆಗೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಅಪಾಯ ಎದುರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಲ ಸಂಪನ್ಮೂಲ ಸಚಿವರು ಜಿಲ್ಲೆಗೆ ಆಗಮಿಸಿ ಖುದ್ದಾಗಿ ಪರಿಶೀಲನೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ವಿಧಾನ ಪರಿಷತ್ನಲ್ಲಿ ಇಂದು ಸರಕಾರದ ಗಮನ ಸೆಳೆದರು.ಈ ಕುರಿತು ಸರಕಾರಕ್ಕೆ ವೀಣಾ ಸಲ್ಲಿಸಿದ್ದ ಪ್ರಶ್ನೆಗೆ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಉತ್ತರದಲ್ಲಿ ಇನ್ನೂ ಇದು ಸರಕಾರದ ಗಮನಕ್ಕೆ ಬಂದಿಲ್ಲ ಎಂದು ಉಲ್ಲೇಖಿಸಿರುವ ಬಗ್ಗೆ ಸದಸ್ಯರು ಗಮನ ಸೆಳೆದರು. ಜಿಲ್ಲೆಯಲ್ಲಿ ಸಂಭವಿಸಿರುವ ಅನಾಹುತದಿಂದ ನದಿಗಳು ಹರಿಯುವ ಮಾರ್ಗ ಬದಲಾಗಿರುವದು, ಹೂಳು ತುಂಬಿರುವದು ವಾಸ್ತವ ವಿಚಾರವಾಗಿದೆ. ಹಾರಂಗಿ ಜಲಾಶಯಕ್ಕೂ ಇದರಿಂದ ಸರಾಗವಾಗಿ ನೀರು ಹರಿದು ಬರುತ್ತಿಲ್ಲ. ಇದರಿಂದ ಕಾವೇರಿ ಅವಲಂಬಿತ ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ಅಪಾಯ ಎದುರಾಗುವ ಸಾಧ್ಯತೆ ಇರುವದರಿಂದ ಸಚಿವರು ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಮಧ್ಯ ಪ್ರವೇಶಿಸಿದ ಜಿಲ್ಲೆಯ ಮತ್ತೋರ್ವ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಕೊಡಗಿನ ವಿಚಾರವಾಗಿ ದ್ದರಿಂದ ತಾವು ಇದಕ್ಕೆ ದನಿಗೂಡಿಸುತ್ತಿರುವದಾಗಿ ಹೇಳಿದರಲ್ಲದೆ ಇಲಾಖೆಯ ಉತ್ತರದಲ್ಲಿ ಗಮನಕ್ಕೆ ಬಂದಿಲ್ಲ ಎಂದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಸಚಿವ ಡಿ.ಕೆ. ಶಿವಕುಮಾರ್ ಅವರು ಇಲ್ಲೂ ರಾಜಕಾರಣ ಬೇಡವೆಂದು ಪ್ರತಿಕ್ರಿಯಿಸಿದ ಪ್ರಸಂಗವೂ ನಡೆಯಿತು.
ಮತ್ತೆ ಈ ಕುರಿತು ಸ್ಪಷ್ಟನೆ ನೀಡಿದ ಡಿ.ಕೆ. ಶಿವಕುಮಾರ್ ಅವರು ಈ ಕುರಿತಾಗಿ ಇನ್ನೂ ತಾಂತ್ರಿಕ ವರದಿ ಬಂದಿಲ್ಲ. ಸರ್ವೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಜಲಸಂಪನ್ಮೂಲ ಇಲಾಖೆಗೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನೂ ದಾಖಲೆ ಮಾಡಲಾಗುತ್ತಿದೆ. ವರದಿ ಬಂದ ನಂತರ ಪರಿಶೀಲಿಸಲಾಗುವದು. ಯಾರಿಗೂ ಸಮಸ್ಯೆಯಾಗಬಾರದೆಂದರು.
(ಮೊದಲ ಪುಟದಿಂದ) ನಂತರ ಮಾತನಾಡಿದ ವೀಣಾ ಅವರು ಮುಂದಿನ ಕೆಲವು ತಿಂಗಳಲ್ಲಿ ಜಿಲ್ಲೆಯಲ್ಲಿ ಮತ್ತೆ ಮಳೆಗಾಲ ಆರಂಭವಾಗಲಿದೆ. ಇದಕ್ಕೂ ಮುನ್ನ ಹೂಳು ತೆಗೆಯದಿದ್ದಲ್ಲಿ ಅಪಾಯ ಎದುರಾಗಲಿದೆ. ಸಚಿವರು ಈಗಾಗಲೇ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ತಿಳಿಸಿರುವದರಿಂದ ಇದನ್ನು ತ್ವರಿತವಾಗಿ ಪರಿಶೀಲಿಸಬೇಕಾಗಿದೆ ಎಂದರು.