ಮಡಿಕೇರಿ, ಡಿ. 12: ಮಡಿಕೇರಿ ನಗರಸಭೆಯ ಮುಂದಿನ ಚುನಾವಣೆ ಸಂಬಂಧ; ಎಲ್ಲ 23 ವಾರ್ಡ್‍ಗಳ ಪುನರ್ ವಿಂಗಡಣೆಯೊಂದಿಗೆ, ಪರಿಷ್ಕøತ ಮತದಾರರ ಪಟ್ಟಿಯ ಕರಡು ಪ್ರತಿ ಹೊರಡಿಸಲಾಗಿದೆ. ಈ ಪಟ್ಟಿಯಿಂದ ಹಾಲೀ ನಗರಸಭಾ ಸದಸ್ಯರ ಸಹಿತ ವಿವಿಧ ಪಕ್ಷಗಳ ಪ್ರಮುಖರು ಬೆಚ್ಚಿ ಬೀಳುವಂತಾಗಿದೆ. ವಾರ್ಡ್‍ಗಳ ವಿಂಗಡಣೆ ಹಾಗೂ ಮತದಾರರ ಪಟ್ಟಿ ಅವೈಜ್ಞಾನಿಕವಾಗಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು. ಅಬ್ದುಲ್‍ರಜಾಕ್ ಹಾಗೂ ಬಿಜೆಪಿಯ ಪಿ.ಟಿ. ಉನ್ನಿಕೃಷ್ಣ, ಪಿ.ಡಿ. ಪೊನ್ನಪ್ಪ ಮೊದಲಾದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಲ್ಲಾ 23 ವಾರ್ಡ್‍ಗಳಿಗೆ ಸಮಾನವಾಗಿ ಮತದಾರರನ್ನು ಹಂಚಿಕೆ ಮಾಡುವ ಪ್ರಯತ್ನ ಮೇಲ್ನೋಟಕ್ಕೆ ಕಂಡು ಬಂದರೂ, ಕರಡು ಪಟ್ಟಿಯಲ್ಲಿ ನಿರ್ಧಿಷ್ಟ ವಸತಿ ಪ್ರದೇಶದ ಮತದಾರರನ್ನು ಅನ್ಯ ಕಡೆಯ ಜನವಸತಿಗೆ ನೂರಾರು ಸಂಖ್ಯೆಯಲ್ಲಿ ಸ್ಥಳಾಂತರದೊಂದಿಗೆ ಹೆಸರುಗಳನ್ನು ಪಟ್ಟಿಗಳಲ್ಲಿ ಮುದ್ರಿಸಿರುವದು ಗೋಚರಿಸಿದೆ.

ಉದಾಹರಣೆಗೆ ವಾರ್ಡ್ ಸಂಖ್ಯೆ 7 ಎಂದು ನಮೂದಿಸಿ ಮಹದೇವಪೇಟೆ ಸುತ್ತಮುತ್ತಲಿನ ನಿವಾಸಿಗಳನ್ನು ಆ ವಾರ್ಡ್‍ನ ಮತದಾರರ ಪಟ್ಟಿಯಲ್ಲಿ ನಮೂದಿಸದೆ, ಅಲ್ಲಿನ ಖಾಯಂ ನಿವಾಸಿಗಳ ಹೆಸರನ್ನು ಬೇರೆಡೆ ಸೇರಿಸಿರುವದು ಅಸಮಾಧಾನಕ್ಕೆ ಕಾರಣವಾಗಿದೆ.

ಅಲ್ಲದೆ 23 ವಾರ್ಡ್‍ಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ವಸತಿಯ ಮತದಾರರು ಹೊರತುಪಡಿಸಿ ಎಲ್ಲೆಲ್ಲಿಯೋ ವಾಸವಿರುವವರ ಹೆಸರುಗಳನ್ನು ನಮೂದಿಸಿರುವದು ಗೋಚರಿಸಿದೆ. ಇನ್ನು ನಿರ್ಧಿಷ್ಟ ವಸತಿ ಪ್ರದೇಶದ ಮಂದಿಯ ಹೆಸರುಗಳು ಆಯ ಜನವಸತಿಯಲ್ಲಿ ನಾಪತ್ತೆಯಾಗಿರುವದು ಇನ್ನಷ್ಟು ಗೊಂದಲ ಹುಟ್ಟು ಹಾಕಿದೆ. ನಿನ್ನೆಯಷ್ಟೇ ಜಿಲ್ಲಾ ಚುನಾವಣಾಧಿಕಾರಿ ಯಾಗಿರುವ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅಧಿಕೃತ ಆದೇಶ ಹೊರಡಿಸಿ; ಮಡಿಕೇರಿ ನಗರಸಭಾ ಚುನಾವಣೆ ಸಂಬಂಧ ಮತದಾರರ ಕರಡು ಪ್ರತಿಯಲ್ಲಿ ಲೋಪಗಳನ್ನು ಸರಿಪಡಿಸಿಕೊಳ್ಳಲು ಸಾರ್ವಜನಿಕ ಪ್ರಕಟಣೆ ನೀಡಿದ್ದರು.

ಇಂದು ಈ ಸಂಬಂಧ ಮಡಿಕೇರಿ ತಾಲೂಕು ಚುನಾವಣಾಧಿಕಾರಿಗಳಾಗಿ ರುವ ತಹಶೀಲ್ದಾರ್ ಕುಸುಮ ಅವರ ಸಮ್ಮುಖದಲ್ಲಿ, ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಕರಡು ಪ್ರತಿಯ ಪರಿಶೀಲನೆ ನಡೆಸಲಾಯಿತು. ಈ ವೇಳೆ ಸ್ಥಳೀಯ ಜನಪ್ರತಿನಿಧಿಗಳ ಸಹಿತ ರಾಜಕೀಯ ಪಕ್ಷಗಳ ಪ್ರಮುಖರು ಕರಡು ಪಟ್ಟಿಯ ಲೋಪದಿಂದ ತೀವ್ರ ಅಸಮಾಧಾನ ತೋಡಿಕೊಂಡರು.

ಈ ಪಟ್ಟಿಯಲ್ಲಿ ಮತದಾರರ ಹೆಸರುಗಳು ಒಬ್ಬರದ್ದೇ ಎರಡೆರಡು ಕಡೆಗಳಲ್ಲಿ ನಮೂದಿಸಲ್ಪಟ್ಟಿದ್ದರೆ, ಕೆಲವು ನಗರಸಭಾ ಸದಸ್ಯರ ಸಹಿತ; ಪ್ರಮುಖ ರಾಜಕೀಯ ಪಕ್ಷಗಳ ಕಾರ್ಯಕರ್ತರ ಹೆಸರುಗಳು ನಾಪತ್ತೆಯಾಗಿರುವ ಅಚ್ಚರಿಯ ಬೆಳವಣಿಗೆ ಕಂಡು ಬಂತು. ಆ ಕಾರಣಕ್ಕಾಗಿ ನಗರಸಭೆಯ ವಾರ್ಡ್‍ಗಳ ಪುನರ್ ವಿಂಗಡಣೆಯೊಂದಿಗೆ ಮತದಾರರ ಸಮರ್ಪಕ ಪಟ್ಟಿ ಪ್ರಕಟಗೊಳ್ಳುವ ತನಕ ಚುನಾವಣೆ ನಡೆಸಬಾರದು ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ಪ್ರಮುಖರು ಆಗ್ರಹಪಡಿಸಿದ್ದು ಗೋಚರಿಸಿತು.

ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಕುಸುಮ ಅವರು, ಇದು ಕರಡು ಪ್ರತಿಯಾದ್ದರಿಂದ ತಿದ್ದುಪಡಿಗೆ ಅವಕಾಶವಿದ್ದು, ಸಾರ್ವಜನಿಕರ ಆಕ್ಷೇಪಣೆಯನ್ನು ಪರಿಗಣಿಸುವ ಮೂಲಕ ನಿಯಮಾನುಸಾರ ಕ್ರಮಕೈಗೊಳ್ಳು ವದಾಗಿ ತಿಳಿಸಿದರು. ಕಾಂಗ್ರೆಸ್, ಬಿಜೆಪಿ ಸಹಿತ ವಿವಿಧ ರಾಜಕೀಯ ಪ್ರತಿನಿಧಿಗಳು ಗೊಂದಲ ಸರಿಪಡಿಸದ ಹೊರತು ಚುನಾವಣೆಗೆ ಅನುವು ಮಾಡಿಕೊಡಬಾರದೆಂದು ಒತ್ತಾಯಿಸಿದರು.