ಪೊನ್ನಂಪೇಟೆ, ಡಿ. 11: ಮಂಗಳವಾರ ಪ್ರಕಟಗೊಂಡ ಚುನಾವಣಾ ಫÀಲಿತಾಂಶದಲ್ಲಿ 3 ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಭಾರಿಸಿದ ಹಿನ್ನೆಲೆಯಲ್ಲಿ ಪೊನ್ನಂಪೇಟೆ ಬ್ಲಾಕ್ ಮತ್ತು ಗೋಣಿಕೊಪ್ಪಲು ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಗೋಣಿಕೊಪ್ಪಲು ಬಸ್ ನಿಲ್ದಾಣದಲ್ಲಿ ವಿಜಯೋತ್ಸವ ಆಚರಿಸಲಾಯಿತು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಅವರ ನೇತೃತ್ವದಲ್ಲಿ ನಡೆದ ವಿಜಯೋತ್ಸವದಲ್ಲಿ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‍ಗಡದಲ್ಲಿ ಕಾಂಗ್ರೆಸ್ ಅತೀ ಹೆಚ್ಚು ಸ್ಥಾನಗಳಿಸಿ ವಿಜಯ ಪತಾಕೆ ಹಾರಿಸಿದ ಕಾರಣದಿಂದ ಇಲ್ಲಿನ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ ಜಯಘೋಷಗಳನ್ನು ಕೂಗುತ್ತಾ ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ತೀತಿರ ಧರ್ಮಜ ಉತ್ತಪ್ಪ ಅವರು, ಕಾಂಗ್ರೆಸ್ ಪಕ್ಷ ಎಂದೂ ಸಾಯುವದಿಲ್ಲ. ಇದರ ಅಸ್ತಿತ್ವ ಸದಾ ಜೀವಂತವಾಗಿರುತ್ತದೆ ಎಂಬದಕ್ಕೆ ಇಂದಿನ ಚುನಾವಣೆಯ ಫಲಿತಾಂಶವೇ ಸಾಕ್ಷಿ. ಕಾಂಗ್ರೆಸ್ ಪಕ್ಷದ ಅಗತ್ಯತೆ ಈ ದೇಶಕ್ಕಿದೆ. ಈ ಕಾರಣ ದಿಂದಲೇ ಪಕ್ಷ ಸದಾ ಜನಪರವಾಗಿ ರುತ್ತದೆ. ಜನರೂ ಕೂಡ ಇದನ್ನೇ ಬಯಸುತ್ತಿದ್ದು, ಕಾಂಗ್ರೆಸ್‍ನಿಂದ ಮಾತ್ರ ಸದೃಡ ಸರಕಾರ ಸಾಧ್ಯ ಎಂಬದು ಜನರ ಆಶಯವಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ಆಪಟ್ಟೀರ ಟಾಟು ಮೊಣ್ಣಪ್ಪ ಮಾತನಾಡಿ, 5 ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಬಿ.ಜೆ.ಪಿ. ಶೂನ್ಯ ಸಾಧನೆ ಮಾಡಿರುವದು ಅದರ ಪತನಕ್ಕೆ ಇಂದಿನಿಂದಲೇ ಮುನ್ನುಡಿ ಬರೆದಂತಾಗಿದೆ. ಬಿ.ಜೆ.ಪಿ.ಯ ಕಪಟ ರಾಜಕೀಯ ದೇಶದಾದ್ಯಂತ ಜನತೆಗೆ ಮನವರಿಕೆಯಾಗಿದ್ದು, ಇದೀಗ ಬಿ.ಜೆ.ಪಿ. ಮುಕ್ತವಾದ ನವ ಭಾರತ ನಿರ್ಮಾಣದ ಹೊಸ ಪರ್ವ ಆರಂಭಗೊಂಡಂತಾಗಿದೆ ಎಂದು ಹೇಳಿದರು.

ವಿಜಯೋತ್ಸವದಲ್ಲಿ ಪಕ್ಷದ ಮುಖಂಡರಾದ ಬಿ.ಎನ್. ಪ್ರಕಾಶ್, ಕೊಳ್ಳಿಮಾಡ ಅಜಿತ್ ಅಯ್ಯಪ್ಪ, ಕೊಲ್ಲಿರ ಬೋಪಣ್ಣ, ಶಾಜಿ ಅಚ್ಯುತ್ತನ್, ಖಾಲಿದ್, ಪಿ.ಜಿ. ರಾಜಶೇಖರ್, ಅಬ್ದುಲ್ ಸಮದ್ ಸೇರಿದಂತೆ ಕಾಂಗ್ರೆಸ್ ಪ್ರಮುಖರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.