ಮಡಿಕೇರಿ, ಡಿ.11: ತಮಿಳುನಾಡಿನ ಚೆನ್ನೈನಲ್ಲಿ ಕೊಡಗು ಪ್ರವಾಸೋದ್ಯಮಕ್ಕೆ ಸೂಕ್ತ ವೇದಿಕೆ ಕಲ್ಪಿಸುವದರೊಂದಿಗೆ ತಮಿಳುನಾಡಿ ನಿಂದ ವಿಶೇಷವಾಗಿ ಕೊಡಗಿಗೆ ಪ್ರವಾಸಿಗರನ್ನು ಆಕರ್ಷಿಸುವ ಕಾರ್ಯಕ್ಕೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಕೊಡಗು ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್ ಅಸೋಸಿಯೇಷನ್ ಮುಂದಾಯಿತು.

ಚೆನ್ನೈನ ವೆಸ್ಟ್ ಇನ್ ಪಂಚತಾರ ಹೊಟೇಲ್ ಸಭಾಂಗಣದಲ್ಲಿ ಡೆಸ್ಟಿನೇಷನ್ ಕೂರ್ಗ್ ಎಂಬ ಹೆಸರಿನಡಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಆಯೋಜಿತ ಕೊಡಗು ಪ್ರವಾಸೋದ್ಯಮ ಕೇಂದ್ರಿಕೃತ ಕಾರ್ಯಕ್ರಮಕ್ಕೆ ಕೊಡಗು ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್ ಅಸೋಸಿಯೇಷನ್ ಉಪಾಧ್ಯಕ್ಷ ಬಿ.ಎಸ್.ಸದಾನಂದ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಬಿ.ಎಸ್.ಸದಾನಂದ, ಕೊಡಗು ಜಿಲ್ಲೆ ಪ್ರವಾಸಿಗರಿಗೆ ವೈವಿಧ್ಯಮಯ ತಾಣಗಳ ಮೂಲಕ ಸುಂದರ ಅನುಭವಕ್ಕೆ ಕಾರಣವಾಗುತ್ತದೆ. ನಿಸರ್ಗ ರಮಣೀಯತೆ, ಧಾರ್ಮಿಕತೆ, ಐತಿಹಾಸಿಕ, ಕ್ರೀಡಾಪ್ರವಾಸೋದ್ಯಮ, ವನ್ಯಜೀವಿ, ಅಣೆಕಟ್ಟುಗಳು, ಉದ್ಯಾನವನ, ಜಲಧಾರೆಗಳೂ ಸೇರಿದಂತೆ ಪ್ರವಾಸಿಗ ಏನನ್ನು ಬಯಸುತ್ತಾನೋ ಅವರ ಆಯ್ಕೆಗೆ ತಕ್ಕಂತ ಪ್ರವಾಸಿ ತಾಣಗಳನ್ನು ಹೊಂದಿದ ವಿಶಿಷ್ಟ ಜಿಲ್ಲೆ ಕೊಡಗು ಎಂದು ತಿಳಿಸಿದರು. ಕೊಡಗಿನ ಕೆಲವೇ ಪ್ರದೇಶಗಳು ಪ್ರಕೃತ್ತಿ ವಿಕೋಪ ಕ್ಕೀಡಾಗಿದ್ದರೂ ಇದೀಗ ಕೊಡಗು ಸಂಪೂರ್ಣ ಸುರಕ್ಷಿತವಾಗಿದ್ದು ಗತವೈಭವ ಮರುಕಳಿಸಿದೆ. ಪ್ರವಾಸಿಗರು ಯಾವದೇ ಸಮಸ್ಯೆಯಿಲ್ಲದಂತೆ ಕೊಡಗು ಪ್ರವಾಸ ಕೈಗೊಳ್ಳಬಹು ದಾಗಿದೆ ಎಂದರು.

ಕೊಡಗು ಹೊಟೇಲ್ ಅಸೋಸಿ ಯನ್ ನಿರ್ದೇಶಕ ಮೋಹನ್‍ದಾಸ್, ಕೊಡಗಿನ ವಿಶಿಷ್ಟತೆಗಳ ಬಗ್ಗೆ ಕಾರ್ಯಕ್ರಮ ದಲ್ಲಿದ್ದವರಿಗೆ ವಿವರಿಸಿದರು. ಭಾರತ ದೇಶಕ್ಕೆ ವೀರಸೇನಾನಿಗಳನ್ನು ನೀಡಿದ ಹೆಮ್ಮೆ ಕೊಡಗು ಜಿಲ್ಲೆಗಿದೆ. ಕೊಡಗು ಕಾಫಿಯು ಜಗದ್ವಿಖ್ಯಾತವಾಗಿದೆ ಎಂದರಲ್ಲದೆ, ತಮಿಳುನಾಡಿನ ಭಾಗ್ಯನದಿಯಾಗಿರುವ ಕಾವೇರಿಯೂ ಕೊಡಗಿನಲ್ಲಿಯೇ ದೈವಿ ರೂಪದಲ್ಲಿ ಉಗಮಿಸುತ್ತಾಳೆ. ಹೀಗಾಗಿ ಕೊಡಗು ಪ್ರವಾಸ ಕೈಗೊಳ್ಳುವದು ಪುಣ್ಯ ಕ್ಷೇತ್ರಕ್ಕೆ ಧಾರ್ಮಿಕ ಪ್ರವಾಸ ಕೈಗೊಂಡಂತೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರವೀಂದ್ರ ಮಾತನಾಡಿ, ಕೊಡಗಿನ ಪ್ರವಾಸೋದ್ಯಮಕ್ಕೆ ಕಾಯಕಲ್ಪ ನೀಡಲು ಪ್ರವಾಸೋದ್ಯಮ ಇಲಾಖೆ ಚೆನ್ನೈನಲ್ಲಿ ಪ್ರವಾಸಿ ಏಜೆಂಟರ ಸಭೆ ಆಯೋಜಿಸಿದ್ದು ಮುಂದಿನ ದಿನಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಇಂತಹ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಸಭೆ ಆಯೋಜಿಸಲಾಗುತ್ತದೆ, ಕೊಡಗು ಪ್ರವಾಸಿಗರಿಗೆ ಸುರಕ್ಷಿತ ಎಂಬ ಸಂದೇಶ ಸಾರಲಾಗುತ್ತದೆ ಎಂದೂ ರವೀಂದ್ರ ಹೇಳಿದರು.

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರತ್ನಾಕರ್, ಕಾರ್ಯಕ್ರಮ ಆಯೋಜಕ ರೋಹಿತ್ ಹಾನಗಲ್, ಕೊಡಗು ಹೊಟೇಲ್ , ರೆಸಾರ್ಟ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್‍ನ 20 ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ತಮಿಳುನಾಡಿನ ವಿವಿಧೆಡೆಗಳ 120 ಪ್ರವಾಸಿ ಏಜೆಂಟರು, ಪ್ರವಾಸೋದ್ಯಮಿಗಳು ಸಭೆಯಲ್ಲಿ ನಡೆದ ಮಾಹಿತಿ ವಿನಿಮಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೊಡಗಿನ ಬಗ್ಗೆ ಮಾಹಿತಿ ಪಡೆದು ಕೊಡಗಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಕಳುಹಿಸುವ ಬಗ್ಗೆ ಭರವಸೆ ನೀಡಿದರು.

ಕೊಡಗು ಹೊಟೇಲ್ ಅಸೋಸಿ ಯೇಷನ್ ವತಿಯಿಂದ ನಿರ್ಮಿಸಲಾದ ಕೊಡಗು ಸುರಕ್ಷಿತ ಮತ್ತು ಮನಮೋಹಕ ಎಂಬ ಕಿರುಚಿತ್ರ ಕಾರ್ಯಕ್ರಮದಲ್ಲಿ ಗಮನ ಸೆಳೆಯಿತು.

ಚೆನ್ನೈನಲ್ಲಿ ನಡೆದ ಸಭೆಯ ಬಗ್ಗೆ ಪ್ರತಿಕ್ರಿಯಿಸಿದ ಕೊಡಗು ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್ ಅಸೋಸಿಯೇಶನ್ ಅಧ್ಯಕ್ಷ ಬಿ.ಆರ್. ನಾಗೇಂದ್ರಪ್ರಸಾದ್, ಇಂತಹ ಸಭೆ, ಕಾರ್ಯಕ್ರಮಗಳು, ವಿಚಾರ ಸಂಕಿರಣಗಳ ಮೂಲಕ ರಾಜ್ಯ ಪ್ರವಾಸೋದ್ಯಮ ಸಚಿವ ಹಾಗೂ ಕೊಡಗು ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಕೊಡಗಿನ ಪ್ರವಾ ಸೋದ್ಯಮಕ್ಕೆ ಮತ್ತೆ ಪುನಶ್ಚೇತನ ನೀಡಲು ಮುಂದಾಗಿದ್ದು ಪ್ರಶಂಸನೀಯ. ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಕೂಡ ಕೊಡಗಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಕರೆತರುವ ನಿಟ್ಟಿನಲ್ಲಿ ವಿವಿಧ ರೀತಿಯಲ್ಲಿ ಕಾರ್ಯಯೋಜನೆ ಹಮ್ಮಿ ಕೊಂಡಿದ್ದಾರೆ. ಇವರೆಲ್ಲರ ಪ್ರಯತ್ನಕ್ಕೆ ಅಸೋಸಿಯೇಷನ್ ತನ್ನೆಲ್ಲಾ ಬೆಂಬಲ ನೀಡುತ್ತದೆ ಎಂದರು. ದೇಶದ ವಿವಿಧ ರಾಜ್ಯಗಳಲ್ಲಿ ಕೊಡಗಿನ ಕುರಿತಾಗಿಯೇ ವಿಶೇಷ ಸಭೆ ಆಯೋಜಿಸುವ ಮೂಲಕ ಪ್ರವಾಸೋದ್ಯಮಿಗಳು, ಪ್ರವಾಸಿ ಏಜೆಂಟರು ಕೊಡಗಿನ ಪ್ರವಾಸೋದ್ಯಮಕ್ಕೆ ಮತ್ತಷ್ಟು ಚೈತನ್ಯ ನೀಡುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳೂ ಸಾಗಿದೆ ಎಂದೂ ನಾಗೇಂದ್ರ ಪ್ರಸಾದ್ ಹೇಳಿದರು.