ಕೂಡಿಗೆ,ಡಿ. 11: ಕೂಡಿಗೆ ವೃತ್ತದಲ್ಲಿ ಅಸಂಬದ್ಧವಾಗಿ ಕೋರಕೊಲ್ಲಿ, ಕೂಡಿಗೆ ಹೆದ್ದಾರಿಯ ರಸ್ತೆಗೆ ವಿದ್ಯುತ್ ಕಂಬ ಅಳವಡಿಸುವ ವಿರುದ್ಧವಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ಗುತ್ತಿಗೆದಾರ ಗ್ರಾ.ಪಂ.ನ ಅನುಮತಿ ಪಡೆಯದೇ ರಸ್ತೆಯ ಅತೀ ಸಮೀಪಕ್ಕೆ ವಿದ್ಯುತ್ ಕಂಬ ಅಳವಡಿಸುತ್ತಿರುವದನ್ನು ಸ್ಥಳೀಯ ಗ್ರಾಮಸ್ಥರಾದ ರಾಜು, ಚಂದ್ರಶೇಖರ್, ಕುಮಾರ್, ಮಂಜುನಾಥ್ ವಿರೋಧ ವ್ಯಕ್ತಪಡಿಸಿದರು.
ಗ್ರಾಮಸ್ಥರು ಈ ಬಗ್ಗೆ ಪಂಚಾಯಿತಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಗ್ರಾ.ಪಂ ಅಧ್ಯಕ್ಷ ಹಾಗೂ ಅಭಿವೃದ್ಧಿ ಅಧಿಕಾರಿ ಸ್ಥಳ ಪರಿಶೀಲಿಸಿ ರಸ್ತೆಯಿಂದ ವಿದ್ಯುತ್ ಕಂಬವನ್ನು ದೂರ ಅಳವಡಿಸುವಂತೆ ಸೂಚಿಸಿದರು. ಸ್ಥಳ ಪರಿಶೀಲಿಸಿ ಮಾತನಾಡಿದ ಗ್ರಾ.ಪಂ ಅಧ್ಯಕ್ಷೆ ಪ್ರೇಮಲೀಲಾ, ವಿದ್ಯುತ್ ಕಂಬವನ್ನು ನಿಲ್ಲಿಸಿರುವ ಜಾಗದ ಸಮೀಪದಲ್ಲಿ ಚರಂಡಿ ಮತ್ತು ಕುಡಿಯುವ ನೀರಿನ ಪೈಪ್‍ಲೈನ್ ಹಾದು ಹೋಗಿದ್ದು, ಇವುಗಳಿಗೆ ತೊಂದರೆಯಾಗದ ರೀತಿಯಲ್ಲಿ ಬದಲಿ ಜಾಗದಲ್ಲಿ ಕಂಬ ನೆಡುವಂತೆ ಸೂಚನೆ ನೀಡಿದರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಿ.ಜೆ. ಲೋಕೇಶ್ ಮಾತನಾಡಿ, ವಿದ್ಯುತ್ ಕಂಬ ನೆಡುವ ಸ್ಥಳದ ಪಕ್ಕದಲ್ಲಿ ಖಾಸಗಿ ಜಾಗವಿದ್ದು, ಅದರ ಅಡಿಭಾಗದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಹಾಗೂ ಕೇಬಲ್ ಸಂಪರ್ಕವಿರುವದರಿಂದ ಗುತ್ತಿಗೆದಾರನಿಗೆ ವಿದ್ಯುತ್ ಕಂಬವನ್ನು ಸ್ಥಳಾಂತರಿಸಲು ಆದೇಶಿಸಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯುತ್ ಕಂಬವನ್ನು ಸ್ಥಳಾಂತರಿಸದಿದ್ದಲ್ಲಿ ಪ್ರತಿಭಟನೆ ನಡೆಸುವದಾಗಿ ಬಸವೇಶ್ವರ ದೇವಾಲಯ ಸಮಿತಿ ಕಾರ್ಯದರ್ಶಿ ಕೆ.ಸಿ. ಚಂದ್ರಶೇಖರ, ಸ್ಥಳೀಯ ಪ್ರಮುಖರಾದ ರಾಜು, ಮಂಜುನಾಥ್, ಕುಮಾರ, ಕೃಷ್ಣ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಗ್ರಾಮಸ್ಥರು ಆಗ್ರಹಿಸಿದ್ದಾರೆ.