ಗೋಣಿಕೊಪ್ಪ ವರದಿ, ಡಿ. 11 : ಕಾಡಾನೆಗಳು ಗ್ರಾಮಕ್ಕೆ ನುಸುಳದಂತೆ ಕಾಯುವ ಸಿಬ್ಬಂದಿಗೆ ಪಟಾಕಿ ನೀಡದೆ ಬೇಜವಾಬ್ದಾರಿ ತೋರಿದ ತಿತಿಮತಿ ಆರ್‍ಎಫ್‍ಒ ಅಶೋಕ್ ಅವರ ನಿರ್ಲಕ್ಷ್ಯದಿಂದಾಗಿ ಮಾಯಮುಡಿಯಲ್ಲಿ ಸುಮಾರು 10 ಎಕರೆಯಷ್ಟು ಭತ್ತ ಫಸಲು ಕಾಡಾನೆ ಪಾಲಾದ ಬಗ್ಗೆ ಆಕ್ಷೇಪ ವ್ಯಕ್ತಗೊಂಡಿದೆ.

ಸ್ಥಳಕ್ಕೆ ವನಪಾಲಕ ಗಣಪತಿ, ಆರ್‍ಆರ್‍ಟಿ ತಂಡ ನಾಯಕ ಸಂಜು ಸಂತೋಷ್ ಹಾಗೂ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪರಿಹಾರ ನೀಡುವ ಭರವಸೆ ನೀಡಿದರು. ಇಷ್ಟಾದರೂ ಮೇಲಾಧಿ ಕಾರಿಗಳು ಸ್ಥಳಕ್ಕೆ ಬಾರದಿರುವ ಬಗ್ಗೆ ಕೃಷಿಕರಿಂದ ಆಕ್ರೋಶ ವ್ಯಕ್ತವಾಯಿತು. ಸೋಮವಾರ ರಾತ್ರಿ ಗ್ರಾಮದ ಕೃಷಿಕರುಗಳಾದ ಸಣ್ಣುವಂಡ ಬಿ. ಅಯ್ಯಪ್ಪ, ಕಿಶೋರ್, ಆಪಟ್ಟೀರ ಮಂದಪ್ಪ, ಗಣಪತಿ, ಕೊಂಗಂಡ ನಂಜಪ್ಪ ಎಂಬವರಿಗೆ ಸೇರಿದ ಬೆಳೆದ ಭತ್ತದ ಫಸಲನ್ನು ಕಾಡಾನೆಗಳು ತಿಂದು ಹಾಕಿವೆ. ಮರಿಗಳೊಂದಿಗೆ ಆಗಮಿಸಿರುವ ಸುಮಾರು 20 ಕಾಡಾನೆಗಳಿಂದ ಗದ್ದೆಯಲ್ಲಿ ರೌದ್ರಾವತಾರದಿಂದಾಗಿ ಸಾಕಷ್ಟು ಫಸಲು ನಾಶವಾಗಿವೆ. ಮರಿಗಳು ಗದ್ದೆಯಲ್ಲಿ ಓಡಾಡಿ, ಕುಣಿದು ಫಸಲು ನಾಶಕ್ಕೆ ಕಾರಣವಾಗಿದೆ. ಇಷ್ಟೆಲ್ಲಾ ಹಾನಿ ಸಂಭವಿಸಿದರೂ ತಿತಿಮತಿ ಆರ್‍ಎಫ್‍ಓ ಅಶೋಕ್ ತನಗೆ ಸಂಬಂಧಿಸಿದ ವಿಷಯವಲ್ಲ ಎಂಬಂತೆ ಕಚೇರಿಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಕೃಷಿಕರು ಕರೆ ಮಾಡಿದರೂ ಸ್ಪಂದಿಸದೆ ನಿರ್ಲಕ್ಷ್ಯ ತೋರಿದ್ದಾರೆ.

ಎರಡು ದಿನಗಳಿಂದ ಗ್ರಾಮದಲ್ಲಿ ಬೀಡುಬಿಟ್ಟಿರುವ 20 ಆನೆಗಳನ್ನು ಕಾಡಿಗಟ್ಟಲು ಸಿಬ್ಬಂದಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇತ್ತ ಪಟಾಕಿ ಇಲ್ಲದೆ ಕಾರ್ಯಾಚರಣೆಗೆ ತೊಡಕಾಗಿದೆ. ಕೃಷಿಕರು ಎಷ್ಟೇ ಸಮಸ್ಯೆ ಹೇಳಿಕೊಂಡರೂ ಸ್ಥಳಕ್ಕೆ ಬಾರದೆ ನುಣುಚಿಕೊಳ್ಳುತ್ತಿರುವ ಆರ್‍ಎಫ್‍ಓ ಕಾರ್ಯವೈಖರಿ ವಿರುದ್ಧ ಕೃಷಿಕರು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಕೃಷಿಕರು ಆಕ್ರೋಶ ವ್ಯಕ್ತಪಡಿಸಿ, ಜವಾಬ್ದಾರಿ ನಿಭಾಯಿಸುವಂತೆ ಗ್ರಾಮಸ್ಥರು ದೂರವಾಣಿ ಮೂಲಕ ಒತ್ತಾಯಿಸಿದರು.

ಆನೆ ಹೊಟ್ಟೆ ಸೇರಿದ 10 ಎಕರೆ ಭತ್ತ ಬೆಳೆ

ಕೊಯ್ಲು ಮಾಡಿ ಹೊರೆ ಕಟ್ಟಿಡಲಾಗಿದ್ದ ಬೆಳೆಯನ್ನು ತಿಂದು, ಗದ್ದೆಯಲ್ಲಿ ಚೆಲ್ಲಾಪಿಲ್ಲಿಯಾಗಿಸಿ ನಾಶಮಾಡಿವೆ. 2 ದಿನಗಳಲ್ಲಷ್ಟೇ ಕೊಯ್ಲು ಮಾಡಬೇಕಿದ್ದ ಸುಮಾರು 4 ಜನ ಕೃಷಿಕರ ಗದ್ದೆಯನ್ನು ಸಂಪೂರ್ಣವಾಗಿ ತುಳಿದು, ತಿಂದಿವೆ. ಅಳಿದುಳಿದ ಬೆಳೆಗಳನ್ನು ಹೆಕ್ಕಿ ತೆಗೆಯಲು ಕೃಷಿಕ ಹೆಚ್ಚುವರಿ ಕಾರ್ಮಿಕರನ್ನು

(ಮೊದಲ ಪುಟದಿಂದ) ಸೇರಿಸಿ ಪ್ರಯತ್ನ ಮುಂದುವರಿಸಿದ್ದಾನೆ. ಇಲಾಖೆ ಮೇಲಾಧಿಕಾರಿಗಳು ಸ್ಥಳಕ್ಕೆ ಬಾರದೆ ನುಣುಚಿಕೊಳ್ಳುತ್ತಿರುವದು ಅಸಮಾಧಾನಕ್ಕೆ ಕಾರಣವಾಗಿದೆ.

ಕಣಕ್ಕೂ ಬಂದವು

ಒಂದಷ್ಟು ಬೆಳೆಗಳನ್ನು ಕೊಯ್ಲು ಮಾಡಿ ಮನೆಯ ಸಮೀಪದ ಕಣಕ್ಕೆ ಸಾಗಿಸಲಾಗಿತ್ತು. ಇಲ್ಲಿಗೂ ಧಾಳಿ ಇಟ್ಟಿರುವ ಆನೆಗಳು ಹೊರೆ ಕಟ್ಟು ಬಿಚ್ಚಿ ನಾಶಪಡಿಸಿವೆ ಕಣದ ಸೇರಿದ ಬೆಳೆ ಕೂಡ ಕೈ ಸೇರದಂತಾಗಿದೆ.

ಮತ್ತಿಗೊಡು ವನ್ಯಜೀವಿ ಇಲಾಖೆ ಅರಣ್ಯದಿಂದ ನೊಕ್ಯ ಗ್ರಾಮದ ಮೂಲಕ ನುಸುಳುವ ಆನೆಗಳನ್ನು ಕಳೆದ 3 ತಿಂಗಳಿನಿಂದ ತಿತಿಮತಿ ಆರ್‍ಆರ್‍ಟಿ ತಂಡ ಹಗಲು, ರಾತ್ರಿ ಕಾವಲು ಕಾಯ್ದು ಬೆಳೆ ರಕ್ಷಣೆಗೆ ಮುಂದಾಗಿತ್ತು. ಇದರಂತೆ ಕೊಯ್ಲಿಗೆ 2 ದಿನಗಳಿರುವಾಗಲೇ ಗ್ರಾಮಕ್ಕೆ ಆನೆಗಳು ಧಾಳಿ ನಡೆಸಿವೆ. ಕಳೆದ 10 ದಿನಗಳಿಂದ ಸಿಬ್ಬಂದಿಗೆ ಪಟಾಕಿ ನೀಡದೆ ಸತಾಯಿಸಿದ್ದೇ ಬೆಳೆ ನಾಶಕ್ಕೆ ಕಾರಣವಾಗಿದೆ. ಆರ್‍ಆರ್‍ಟಿ ತಂಡದ ಸದಸ್ಯರು ಪಟಾಕಿ ಇಲ್ಲದೆ ಆನೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಅಸಹಾಯಕರಾಗಿ ಉತ್ತರ ನೀಡುತ್ತಿದ್ದಾರೆ. ಇಲಾಖೆಗಳಲ್ಲಿನ ಗೊಂದಲ, ಸಮಸ್ಯೆ ಕೃಷಿಕನ ಹೊಟ್ಟೆಗೆ ಹಿಟ್ಟಿಲ್ಲದಂತಾಗಿಸಿದೆ. ಕೃಷಿಕರಿಗೆ ಲಕ್ಷಾಂತರ ರೂ. ನಷ್ಟವಾಗಿದೆ.

ತಿತಿಮತಿ ಆರ್‍ಆರ್‍ಟಿ ತಂಡಕ್ಕೆ ಕಾಡಾನೆ ಕಾಯಲು ಪಟಾಕಿ ನೀಡದೆ ಸತಾಯಿಸಿದ ಆರ್‍ಎಫ್‍ಓ ಅಶೋಕ್ ವಿರುದ್ಧ ಕೃಷಿಕರು ಹರಿಹಾಯ್ದರು. ದೂರವಾಣಿ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರಾದರೂ ಬಾರದೆ ಜಾರಿಕೊಂಡರು. ಪಟಾಕಿ ದಾಸ್ತಾನು ಇಲ್ಲ, ಎರಡು ದಿನಗಳಲ್ಲಿ ಲಭ್ಯವಾಗಲಿದೆ ಎಂದು ಸಬೂಬು ನೀಡಿದ ಅಧಿಕಾರಿ ವಿರುದ್ಧ ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದರು.

- ಸುದ್ದಿಪುತ್ರ