ಮಡಿಕೇರಿ, ಡಿ. 11: ದಕ್ಷಿಣ ಕೊಡಗಿನಲ್ಲಿ ಬಹುತೇಕ ರೈತರು ಅತಿರ (ಕೆಂಪು ಅಕ್ಕಿ) ಭತ್ತ ಬೆಳೆಯನ್ನು ಬೆಳೆದಿದ್ದು, ಸೂಕ್ತ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಕೇಂದ್ರ ಸರಕಾರದಿಂದ ಭತ್ತ ಖರೀದಿಗೆ 1750 ರೂ. ಬೆಂಬಲ ಬೆಲೆ ಘೋಷಿಸಿದ್ದರೂ ರಾಜ್ಯ ಸರಕಾರ ಕೆಂಪು ಅಕ್ಕಿ ಬೆಳೆಯನ್ನು ಹೊರತುಪಡಿಸಿ ಇತರ ಎಲ್ಲಾ ವಿವಿಧ ಭತ್ತವನ್ನು ಖರೀದಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅತಿರ ಬೆಳೆ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ವಿಚಾರ ಇಂದು ನಡೆದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು.ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಈ ಕುರಿತು ಪ್ರಸ್ತಾಪಿಸಿದರು. ವೀರಾಜಪೇಟೆ, ಗೋಣಿಕೊಪ್ಪ ಸೇರಿದಂತೆ ದಕ್ಷಿಣ ಕೊಡಗಿನ ಭಾಗದಲ್ಲಿ ಹೆಚ್ಚಿನ ರೈತರು ಅತಿರ ಬೆಳೆ ಬೆಳೆದಿದ್ದಾರೆ. ಆದರೆ ಅವರುಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಅತಿರ ಬೆಳೆ ಬೆಳೆಯಲು ಬಿತ್ತನೆ ಬೀಜ ನೀಡಿ ಪ್ರೋತ್ಸಾಹಿಸಿದ ಕೃಷಿ ಇಲಾಖೆ ಮೌನ ವಹಿಸಿದ್ದು, ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಕೃಷಿ ಅಧಿಕಾರಿ ಕೃಷಿ ಇಲಾಖೆಯಿಂದ 908 ಕ್ವಿಂಟಾಲ್ ಅತಿರ ಬೆಳೆಯ ಬೀಜಗಳನ್ನು ವಿತರಿಸಲಾಗಿದ್ದು, 3650 ಎಕರೆ ಪ್ರದೇಶದಲ್ಲಿ ರೈತರು ಈ ಬೆಳೆಯನ್ನು ಬೆಳೆಸಿದ್ದಾರೆ. ರಾಜ್ಯ ಸರಕಾರ ಭತ್ತ ಖರೀದಿ ಕೇಂದ್ರ ತೆರೆಯಲು ಸೂಚನೆ ನೀಡಿದೆ. ಆದರೆ ಕೆಂಪಕ್ಕಿಯನ್ನು ಹೊರಗಿಟ್ಟಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬೋಪಣ್ಣ, ಹಾಗಿದ್ದ ಮೇಲೆ ಯಾವ ಆಧಾರದಲ್ಲಿ ರೈತರಿಗೆ ನೀವು ಕೆಂಪಕ್ಕಿಯ ಬೀಜ ವಿತರಣೆ ಮಾಡಿದ್ದಿರಿ ಎಂದು ಪ್ರಶ್ನಿಸಿದರಲ್ಲದೆ, ಕೂಡಲೇ ಕೃಷಿ ಇಲಾಖೆ ವತಿಯಿಂದ ಕೆಂಪಕ್ಕಿಯನ್ನು ಖರೀದಿ ಮಾಡಬೇಕು. ಈ ಕುರಿತು ಸರಕಾರಕ್ಕೆ ಪತ್ರ ಬರೆಯುವಂತೆ ಆಗ್ರಹಿಸಿದರು. ಈ ಕುರಿತು ಸರಕಾರಕ್ಕೆ ಪತ್ರ ಬರೆದು ಗಮನ ಸೆಳೆಯುವದಾಗಿ ಕೃಷಿ ಅಧಿಕಾರಿ ಹೇಳಿದರು.

ವೀರಾಜಪೇಟೆ ತಾಲೂಕಿನಲ್ಲಿ ಸುಮಾರು 6 ವರ್ಷಗಳಿಂದ ಮರಳು ಟೆಂಡರ್ ಕರೆದಿಲ್ಲ. ಇದರಿಂದ ಮರಳು ಅಕ್ರಮಗಳು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದವರು ಗಮನ ಹರಿಸಿ ಕ್ರಮಕೈಗೊಳ್ಳುವಂತೆ ಬೋಪಣ್ಣ ಒತ್ತಾಯಿಸಿದರು.

ಅಧಿಕಾರಿಗಳು ಸ್ಪಂದಿಸದಿದ್ದರೆ ಹೋರಾಟ

ಜಿಲ್ಲೆಯಾದ್ಯಂತ ಕನ್ನಡ ನಾಮಫಲಕ ಅಳವಡಿಸುವಂತೆ ಹಲವಾರು ಬಾರಿ ಮನವಿ ಮಾಡಿದ್ದೇನೆ. ಆದರೆ ಪ್ರಯೋಜನ ವಾಗಿಲ್ಲ. ಕೆಲವೆಡೆಗಳಲ್ಲಿ ಇಂಗ್ಲೀಷ್ ಪದಗಳನ್ನು ಕನ್ನಡದಲ್ಲಿ ಬರೆಯಲಾಗಿದೆ. ಇದು ಸರಿಯಲ್ಲ.

ಕನ್ನಡ ಭಾಷೆಯಲ್ಲೇ ನಾಮ ಫಲಕಗಳು ಬರೆದು ಅಳವಡಿಸುವದನ್ನು ಅಧಿಕಾರಿಗಳು ಕಡ್ಡಾಯಗೊಳಿಸಬೇಕು. ಅಧಿಕಾರಿಗಳು ನಮ್ಮ ಕೋರಿಕೆಗೆ ಸ್ಪಂದಿಸದಿದ್ದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್ ಎಚ್ಚರಿಕೆಯಿತ್ತರು.

ಜ. 4ಕ್ಕೆ ಜಿ.ಪಂ. ಭವನ

ನೂತನ ಜಿಲ್ಲಾ ಪಂಚಾಯತ್ ಭವನ ಕಾಮಗಾರಿ ಭರದಿಂದ ಸಾಗಿದೆ. ಮುಂದಿನ ಜನವರಿ 4ಕ್ಕೆ ಭವನದ ಕಾಮಗಾರಿಯನ್ನು ಪೂರ್ಣಗೊಳಿಸಿ ಹಸ್ತಾಂತರಿಸಲು ಸಿದ್ಧತೆ ನಡೆದಿದೆ ಎಂದು ಪಂಚಾಯತ್ ರಾಜ್ ಇಂಜಿನಿಯರಿಂಗ್

(ಮೊದಲ ಪುಟದಿಂದ) ವಿಭಾಗದ ಅಧಿಕಾರಿ ಮಾಹಿತಿಯಿತ್ತರು. ಪ್ರಸಕ್ತ ಡಿಸೆಂಬರ್ ಅಂತ್ಯಕ್ಕೆ ನೂತನ ನ್ಯಾಯಾಲಯ ಕಟ್ಟಡ ಕಾಮಗಾರಿಯು ಪೂರ್ಣಗೊಳ್ಳಲಿದೆ ಎಂದು ಸಂಬಂಧಿಸಿದ ಅಧಿಕಾರಿ ತಿಳಿಸಿದರು.

172 ಜಾನುವಾರುಗಳ ಸಾವು

ಈ ಬಾರಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ 172 ಜಾನುವಾರುಗಳು ಸಾವಿಗೀಡಾಗಿವೆ. 30ಲಕ್ಷ, 80 ಸಾವಿರ ರೂ. ಪರಿಹಾರ ವಿತರಿಸಲಾಗಿದೆ. ಆ ಸಂದರ್ಭ ತೆರೆಯಲಾಗಿದ್ದ ಗೋ ಶಾಲೆಯಲ್ಲಿದ್ದ ಬಹುತೇಕ ಎಲ್ಲ ಹಸುಗಳನ್ನು ಮಾಲೀಕರು ಕೊಂಡೊಯ್ದಿದ್ದಾರೆ. ಪ್ರಸ್ತುತ 4 ಜಾನುವಾರು ಗೋ ಶಾಲೆಯಲ್ಲಿವೆ ಎಂದು ಪಶುಸಂಗೋಪನಾ ಇಲಾಖಾಧಿಕಾರಿ ಮಾಹಿತಿ ನೀಡಿದರು.

ಶ್ರೀಮಂಗಲ ವ್ಯಾಪ್ತಿಯಲ್ಲಿ 7 ಆನೆಗಳು!

ಶ್ರೀಮಂಗಲ ವ್ಯಾಪ್ತಿಯಲ್ಲಿ 7 ಆನೆಗಳು ಮಾತ್ರ ಇವೆ ಎಂದು ಎಸಿಎಫ್ ಸಭೆಯಲ್ಲಿ ಮಾಹಿತಿ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಯಾವ ಆಧಾರದಲ್ಲಿ ಕೇವಲ 7 ಕಾಡಾನೆಗಳಿವೆ ಎಂದು ಹೇಳುತ್ತಿದ್ದೀರಾ, 10ಕ್ಕೂ ಅಧಿಕ ಕಾಡಾನೆಗಳು ಒಂದೊಂದು ಸ್ಥಳದಲ್ಲಿ ಕಾಣಸಿಗುತ್ತಿವೆ. ಹೀಗಿರುವಾಗ ಬಾಯಿಗೆ ಬಂದಂತೆ ಲೆಕ್ಕ ನೀಡಿ ನಮ್ಮನ್ನೇಕೆ ದಾರಿ ತಪ್ಪಿಸುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಲಾ ಕಟ್ಟಡಕ್ಕೆ 88 ಲಕ್ಷ

ಪ್ರಕೃತಿ ವಿಕೋಪದಲ್ಲಿ ದುರಸ್ತಿಗೀಡಾದ ಶಾಲಾ ಕಟ್ಟಡಗಳ ದುರಸ್ತಿ ಕಾರ್ಯಕ್ಕೆ ರೂ. 88 ಲಕ್ಷ ಬಿಡುಗಡೆಯಾಗಿದೆ. ಆಶ್ರಮ ಶಾಲೆಗಳಲ್ಲಿ ಸಿಸಿಟಿವಿ ಹಾಗೂ ಬಯೋಮೆಟ್ರಿಕ್ ವ್ಯವಸ್ಥೆ ಸದ್ಯದಲ್ಲೇ ಜಾರಿಯಾಗಲಿದೆ. ಹಾಡಿಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವ ಸಂಬಂಧ ರೂ. 10 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದರು.

ಇತ್ತೀಚೆಗೆ ನಿಧನರಾದ ಅನಂತ್ ಕುಮಾರ್, ಸಿ.ಕೆ. ಜಾಫರ್ ಷರೀಫ್, ಅಂಬರೀಷ್ ಇವರುಗಳಿಗೆ ಸಭೆಯಲ್ಲಿ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.