ಮಡಿಕೇರಿ, ಡಿ. 12: ಮೇಲಿಂದ ಮೇಲೆ ಎಟಿಎಂ ಗ್ರಾಹಕರಿಗೆ ಅನಾಮಿಕ ಮಂದಿ ಕರೆ ಮಾಡಿ, ತಮ್ಮ ಬ್ಯಾಂಕ್ ಖಾತೆಗಳ ವಿವರ ಕೇಳಿ ಮೋಸಗೊಳಿಸುತ್ತಿರುವ ಜಾಲವೊಂದರ ಬಲೆಗೆ ಜಿಲ್ಲೆಯ ಪ್ರಮುಖ ಅಧಿಕಾರಿಯೊಬ್ಬರ ಸಹಿತ, ನಗರದ ಹಿರಿಯ ವಕೀಲರೊಬ್ಬರು ಸಿಲುಕಿದ್ದಲ್ಲದೆ, ಹಣ ಕಳೆದುಕೊಂಡಿರುವ ತೀವ್ರ ಆತಂಕಕಾರಿ ಸಂಗತಿ ಬಹಿರಂಗಗೊಂಡಿದೆ. ಇಂತಹ ಬೆಳವಣಿಗೆಗಳು ಮೇಲಿಂದ ಮೇಲೆ ಘಟಿಸುತ್ತಿದ್ದರೂ, ಅನೇಕರು ದೈನಂದಿನ ಕೆಲಸಗಳ ಒತ್ತಡಗಳ ನಡುವೆ, ಮೋಸದ ಜಾಲದ ಅರಿವಿಲ್ಲದೆ, ಅಪರಿಚಿತರ ಕರೆಗಳನ್ನು ಸ್ವೀಕರಿಸಿ, ಅಂತಹ ಆಗಂತುಕರು ಕೇಳಿದ ಮಾಹಿತಿಯೆಲ್ಲವನ್ನು ನೀಡಿ ಮೋಸ ಹೋಗುತ್ತಿದ್ದಾರೆ.
ಪ್ರಸಕ್ತ ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಹಿನ್ನೆಲೆ, ವಿಶೇಷ ಕರ್ತವ್ಯದಲ್ಲಿರುವ ಕಂದಾಯ ಇಲಾಖೆಯ ಪ್ರಮುಖ ಅಧಿಕಾರಿಯೊಬ್ಬರು, ಮೋಸದ ಅರಿವಿಲ್ಲದೇ, ಅಪರಿಚಿತ ಮೊಬೈಲ್ ಕರೆ ಸ್ವೀಕರಿಸಿ ತಮ್ಮ ಎಟಿಎಂ ದಾಖಲಾತಿ ವಿವರ ನೀಡಿದ್ದಾರೆ.ಈ ಅಧಿಕಾರಿಯಿಂದ ಬೇರೆ ಬೇರೆ ಸಂಖ್ಯೆಗಳಿಂದ ಕರೆ ಮಾಡಿ, ಬ್ಯಾಂಕ್ ಖಾತೆಯ ವಿವರದೊಂದಿಗೆ ಎಟಿಎಂ ಸಂಬಂಧ ರಹಸ್ಯ ಸಂಖ್ಯೆಗಳನ್ನು ಪಡೆದಿರುವ ವಂಚಕರ ಜಾಲ ರೂ. 1.20 ಲಕ್ಷ ಹಣವನ್ನು ಲಪಟಾಯಿಸಿರುವದು ದೃಢಪಟ್ಟಿದೆ. ಸಂಬಂಧಿಸಿದ ಅಧಿಕಾರಿ ದೈನಂದಿನ ವ್ಯವಹಾರಗಳ ಬಗ್ಗೆ ತಮ್ಮ ಉಳಿತಾಯ ಖಾತೆಯನ್ನು ಗಮನಿಸಿದ ಸಂದರ್ಭವಷ್ಟೇ ಮೋಸದ ಜಾಲಕ್ಕೆ ಸಿಲುಕಿರುವದು ಅರಿವಿಗೆ ಬಂದಿದೆ.
ಆ ಮೇರೆಗೆ ಎಚ್ಚೆತ್ತುಕೊಂಡಿರುವ ಕಂದಾಯ ಇಲಾಖೆ ಪ್ರಮುಖ ಅಧಿಕಾರಿ ಪೊಲೀಸ್ ಪುಕಾರು ನೀಡುವದರೊಂದಿಗೆ, ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ.
ಇನ್ನೊಂದೆಡೆ ಇದೇ ರೀತಿಯಲ್ಲಿ ವಕೀಲರೊಬ್ಬರನ್ನು ಅನಾಮಿಕರ ಜಾಲ ವಂಚನೆಯ ಜಾಲಕ್ಕೆ ಕೆಡವಿರುವದು ಬೆಳಕಿಗೆ ಬಂದಿದ್ದು, ನಗರದ ಶಾಲಾ ರಸ್ತೆಯ ಈ ಹಿರಿಯ ವಕೀಲರ ಖಾತೆಯಿಂದ ವಂಚಕರು ರೂ. 26,200 ಮೊತ್ತ ಉಪಟಾಯಿಸಿರುವದು ಖಾತರಿಯಾಗಿದೆ.
ಪೊಲೀಸರಿಗೆ ದೂರು : ಎರಡು ಈ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವದಾಗಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.
ಎಚ್ಚರಿಕೆ ಗಂಟೆ : ಬ್ಯಾಂಕ್ ಖಾತೆಗಳು ಹಾಗೂ ಎಟಿಎಂ ಸಂಬಂಧ ರಹಸ್ಯ ಮಾಹಿತಿಯನ್ನು ಪಡೆಯುವ ನೆಪದಲ್ಲಿ
(ಮೊದಲ ಪುಟದಿಂದ) ವ್ಯವಸ್ಥಿತ ಜಾಲದೊಂದಿಗೆ ಅನಾಮಿಕರು, ಗ್ರಾಹಕರಿಗೆ ಬ್ಯಾಂಕ್ ಅಧಿಕಾರಿಗಳ ನೆಪದಲ್ಲಿ ಕರೆ ಮಾಡಿ ವಂಚಿಸುತ್ತಿರುವದು ಸಾಕಷ್ಟು ಕಡೆ ನಡೆದಿದೆ. ಇಂತಹ ವಂಚನೆಗೆ ಸಿಲುಕಿ ಅನೇಕರು ಹಣ ಕಳೆದುಕೊಂಡಿದ್ದಾರೆ.
ಹೀಗಿದ್ದರೂ ಪದೇ ಪದೇ ಮೋಸದ ಬಗ್ಗೆ ಎಚ್ಚೆತ್ತುಕೊಳ್ಳದೆ ಸಾರ್ವಜನಿಕರು ಅಥವಾ ಬ್ಯಾಂಕ್ ಗ್ರಾಹಕರು ಅಪರಿಚಿತ ವ್ಯಕ್ತಿಗಳ ಕರೆ ಸ್ವೀಕರಿಸಿ ನಗದು ಕಳೆದುಕೊಳ್ಳುತ್ತಿ ರುವದು ಮುಂದುವರಿದಿದೆ.
ಈ ದಿಸೆಯಲ್ಲಿ ಇನ್ನಾದರೂ ಸಾರ್ವಜನಿಕರು ಎಚ್ಚೆತ್ತುಕೊಂಡು ತಮ್ಮ ತಮ್ಮ ಬ್ಯಾಂಕ್ ವ್ಯವಹಾರಗಳಿಗೆ ಸಂಬಂಧಿಸಿದಂತೆ, ದಾಖಲೆಗಳ ಬಗ್ಗೆ ರಹಸ್ಯ ಕಾಯ್ದುಕೊಂಡು ನೇರವಾಗಿ ಆಯಾ ಬ್ಯಾಂಕ್‍ಗಳಲ್ಲಿ ಖುದ್ದು ವ್ಯವಹರಿಸಿ ನೈಜಾಂಶ ತಿಳಿದುಕೊಳ್ಳು ವದು ಒಳಿತು ಎಂದು ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದ್ದಾರೆ.