ಸೋಮವಾರಪೇಟೆ, ಡಿ.10: ಕೊಡಗಿನ ಗಡಿಯಾಗಿರುವ ಕೊಡ್ಲಿಪೇಟೆಯಲ್ಲಿ ಕನ್ನಡ ಸಾಹಿತ್ಯ ಭವನಕ್ಕೆ ಅಗತ್ಯ ಜಾಗ ಒದಗಿಸಿದರೆ ಕಸಾಪ ವತಿಯಿಂದ ರೂ. 15 ಲಕ್ಷ ಅನುದಾನ ಕಲ್ಪಿಸಲು ಕ್ರಮ ವಹಿಸ ಲಾಗುವದು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್ ಹೇಳಿದರು.

ಜಿಲ್ಲಾ ಕಸಾಪ, ಸೋಮವಾರಪೇಟೆ ತಾಲೂಕು ಮತ್ತು ಕೊಡ್ಲಿಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್, ಕಿರಿಕೊಡ್ಲಿ ಮಠದ ಎಸ್‍ಜಿಎಸ್ ವಿದ್ಯಾಪೀಠದ ಆಶ್ರಯದಲ್ಲಿ, ಕಿರಿಕೊಡ್ಲಿ ಮಠದ ಶಾಲಾ ಸಭಾಂಗಣದಲ್ಲಿನ ಜಂಗಮರ ಶರಣ ಲಿಂಗೈಕ್ಯ ಎಸ್.ಎಸ್. ನೇಮಿರಾಜ್ ಪ್ರಧಾನ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಸಾಪ ಜಿಲ್ಲಾ ಸಮಿತಿ ಅಧಿಕಾರಕ್ಕೆ ಬಂದ ನಂತರ 5 ತಾಲೂಕು ಸಮ್ಮೇಳನ, 2 ಜಿಲ್ಲಾ ಸಮ್ಮೇಳನ, 2 ಕೃಷಿ, 2 ಮಕ್ಕಳ ಸಮ್ಮೇಳನ ಸೇರಿದಂತೆ 11 ಸಮ್ಮೇಳನ ಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಕೊಡ್ಲಿಪೇಟೆಯಲ್ಲಿ ಅಗತ್ಯ ನಿವೇಶನ ನೀಡಿದರೆ ಹೋಬಳಿ ಮಟ್ಟದ ಸಾಹಿತ್ಯ ಭವನ ನಿರ್ಮಾಣಕ್ಕೆ ರೂ. 15 ಲಕ್ಷ ಒದಗಿಸಲಾಗುವದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮ್ಮೇಳನಾಧ್ಯಕ್ಷೆ ಕೃತಜ್ಞ ಬೆಸೂರು ವಹಿಸಿದ್ದರು. ಎಸ್‍ಎನ್‍ಎಸ್ ವಿದ್ಯಾಪೀಠದ ಅಧ್ಯಕ್ಷ ಮಹಾಂತ ಸ್ವಾಮೀಜಿ, ಕಲ್ಲಳ್ಳಿ ಮಠಾಧೀಶರಾದ ರುದ್ರಮುನಿ ಸ್ವಾಮೀಜಿ, ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್, ಕಸಾಪ ಪದಾಧಿಕಾರಿಗಳಾದ ಡಿ. ಭಗವಾನ್, ಪ್ರಮುಖರಾದ ನಾಗರಾಜ್, ಯತೀಶ್, ಗಂಗಮ್ಮ, ದಿವಾಕರ್, ಜಲಾ ಕಾಳಪ್ಪ, ಕವಿತಾ, ಶಾಂತಮಲ್ಲಪ್ಪ ಸೇರಿದಂತೆ ಇತರರು ಉಪಸ್ಥಿತರಿ ದ್ದರು.

ಸಾಧಕ ಮಕ್ಕಳಿಗೆ ಸನ್ಮಾನ: ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಚಿತ್ರಕಲೆ ವಿಭಾಗದಲ್ಲಿ ಕೊಡ್ಲಿಪೇಟೆಯ ಕವನ ವಾಸು, ಕ್ರೀಡೆಯಲ್ಲಿ ಫಾತಿಮತ್ ಸಿಯಾನ, ನಾಟಕ ವಿಭಾಗದಲ್ಲಿ ಊರುಗುತ್ತಿಯ ಪ್ರೀತಿ, ಸಂಗೀತ ಕ್ಷೇತ್ರದಲ್ಲಿ ಸೋಮವಾರಪೇಟೆಯ ಸುಧನ್ವ, ಬಹುಮುಖ ಪ್ರತಿಭೆ ಚಿಕ್ಕಭಂಡಾರದ ಸಿ.ಡಿ. ಮನೋಜ್, ಕ್ರೀಡೆಯಲ್ಲಿ ಬೆಸೂರಿನ ಅನುಪಮ, ಶ್ಲೋಕ ಪಠಣದಲ್ಲಿ ಸೋಮವಾರಪೇಟೆಯ ಅನ್ಷ್ ಅಶ್ವಿನ್, ಕಸ್ತೂರಿ ಕನ್ನಡ ಪ್ರತಿಭೆ ಮಡಿಕೇರಿಯ ಸಂಜನಾ, ನೃತ್ಯ ವಿಭಾಗದಲ್ಲಿ ಎಂ.ಡಿ. ನಿಹಾರಿಕ, ಭರತನಾಟ್ಯ ವಿಭಾಗದಲ್ಲಿ ವೀರಾಜಪೇಟೆಯ ವಿ.ಎಸ್. ಸುರಕ್ಷಾ ಅವರುಗಳನ್ನು ಸನ್ಮಾನಿಸಲಾಯಿತು.

ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ ಬಾಳೆಲೆಯ ಅನ್ವಿತ್‍ಕುಮಾರ್, ರಸಪ್ರಶ್ನೆ ವಿಭಾಗದಲ್ಲಿ ಸೋ.ಪೇಟೆಯ ಶ್ರೀವಿದ್ಯಾ, ಯೋಗ ಪಟು ಕೂಡಿಗೆಯ ನಮಿತ, ಜನಪದ ನೃತ್ಯ ವಿಭಾಗದಲ್ಲಿ ಶರಣ್ಯ, ಭರತನಾಟ್ಯ ವಿಭಾಗದಲ್ಲಿ ಹಾಕತ್ತೂರಿನ ದೃಶ್ಯ, ವಿಜ್ಞಾನ ಪ್ರತಿಭೆಯಲ್ಲಿ ಚೌಡ್ಲುವಿನ ಸುದೀಕ್ಷಾ, ಅಭಿನಯ ವಿಭಾಗದಲ್ಲಿ ತಾವೂರಿನ ಸುಪ್ರಿತ, ಲಘು ಸಂಗೀತದಲ್ಲಿ ನ್ಯಾಯದಹಳ್ಳದ ವಿಜಯ್‍ಕುಮಾರ್, ಬಾಲಕವಿ ದಿಶಾಂಕ್, ಹಾಕಿ ಕ್ರೀಡೆಯಲ್ಲಿ ಮಕ್ಕಂದೂರಿನ ಕೆ.ಎಸ್. ಸುರಕ್ಷಾ, ಶೈಕ್ಷಣಿಕ ಕ್ಷೇತ್ರದಿಂದ ಸೋ.ಪೇಟೆಯ ಎಸ್. ಗಾನ, ಸಿರಿಗನ್ನಡ ವಿಭಾಗದಲ್ಲಿ ಡಿ.ಆರ್. ಶಿವಾನಿ, ಕ್ರೀಡಾಕ್ಷೇತ್ರದಿಂದ ಅರ್ಪಿತ ಅವರುಗಳನ್ನು ಅಭಿನಂದಿಸ ಲಾಯಿತು. ಮಕ್ಕಳ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ, ಅಬ್ದುಲ್ ರಬ್, ವರಪ್ರಸಾದ್, ಸಿದ್ದೇಶ್ ಸೇರಿದಂತೆ ಸಮ್ಮೇಳನಾಧ್ಯಕ್ಷೆ ಕೃತಜ್ಞ ಬೆಸೂರು ಅವರುಗಳನ್ನು ಕಸಾಪ ವತಿಯಿಂದ ಅಭಿನಂದಿಸಲಾಯಿತು.