ಮಡಿಕೇರಿ, ಡಿ. 9: ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಂಗ ಮಹಿಳಾ ಸಮಾಜದ ವತಿಯಿಂದ ಮಕ್ಕಳಿಗೋಸ್ಕರ, ಮಕ್ಕಳಿಂದಲೇ ಮಕ್ಕಳ ದಿನಾಚರಣೆಯನ್ನು ಏರ್ಪಡಿಸಲಾಗಿತ್ತು. ಮಕ್ಕಳ ದಿನಾಚರಣೆಯನ್ನು ಮಾಡುವದರ ರೂಪುರೇಶೆಗಳನ್ನು ಮಹಿಳಾ ಸಮಾಜದ ಅಧ್ಯಕ್ಷೆ ಭಾರತಿ ರಮೇಶ್ ಅವರು ಸಭೆಯಲ್ಲಿ ತಿಳಿಸಿ ಕಾರ್ಯಕ್ರಮವನ್ನು ನಡೆಸಲು ಮಕ್ಕಳಿಗೆ ಅರಿವು ಮಾಡಿಕೊಟ್ಟರು.

ಕಾರ್ಯಕ್ರಮದ ಜವಾಬ್ದಾರಿಯನ್ನು ಹೊತ್ತ ನಿರೂಪಕಿ ಲಿಖಿತಾ ಉಮೇಶ್ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಯಶಿಕಾ ರಮೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶ್ರೇಯಾ ಉಮೇಶ್, ಚಿನ್ಮಯಿ ಜಗದೀಶ್, ನಿಶ್ಮಿತಾ ದಯಾನಂದ್ ನಾಡಗೀತೆಯನ್ನು ಹಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ನಿಶ್ಮಿತಾ ದಯಾನಂದ್ ದೇಶಭಕ್ತಿ, ದೇಶಪ್ರೇಮವನ್ನು ಬೆಳೆಸಿಕೊಳ್ಳುವಂತೆ ಹೇಳಿದರು. ಅತಿಥಿಗಳಾಗಿ ಆಗಮಿಸಿದ್ದ ಪೃಥ್ವಿರಮೇಶ್, ಶ್ರೇಷ್ಠಾ ರಮಿತಾ, ಅಭಿಷೇಕ್ ಕೆಂಚೆಟ್ಟಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಶ್ರೇಷ್ಠಾ ರಮಿತಾ ಮತ್ತು ಅಭಿಷೇಕ್ ಕೆಂಚೆಟ್ಟಿ ಅವರು ದಿನದ ಮಹತ್ವದ ಬಗ್ಗೆ ಹಾಗೂ ಚಾಚಾ ನೆಹರು ಅವರ ಬಗ್ಗೆ ಮಾತನಾಡಿದರು. ಮಕ್ಕಳಿಗೆ ಛದ್ಮವೇಷ ಸ್ಪರ್ಧೆ ನಡೆಯಿತು.