ಮಡಿಕೇರಿ, ಡಿ. 9: ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿ ಕ್ಷೇತ್ರದ ಅಭಿವೃದ್ಧಿಯೊಂದಿಗೆ ಶ್ರೀ ಅಗಸ್ತ್ಯೇಶ್ವರ ಸನ್ನಿಧಿ ಪುನರ್ ಪ್ರತಿಷ್ಠಾಪನಾ ಕಾರ್ಯಕ್ಕೆ ಇಂದು ವಿಧಿವಿಧಾನಗಳೊಂದಿಗೆ ಚಾಲನೆ ನೀಡಲಾಯಿತು. ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ನೇತೃತ್ವದಲ್ಲಿ ಸಮಿತಿ ಸದಸ್ಯರು, ಅರ್ಚಕ ಪ್ರಶಾಂತ್ ಆಚಾರ್ ಮೂಲಕ ವಿಧಿವಿಧಾನಗಳಿಗೆ ಚಾಲನೆ ನೀಡಿದರು. ಅಗಸ್ತ್ಯೇಶ್ವರನಿಗೆ ರುದ್ರಾಭಿಷೇಕದೊಂದಿಗೆ ಪೂಜೆ, ಮಹಾಗಣಪತಿಗೆ ಅಪ್ಪ ಕಜ್ಜಾಯ ಸೇವೆ, ಶ್ರೀ ಕಾವೇರಿಗೆ ಮಹಾ ಪೂಜೆಯೊಂದಿಗೆ ಪರಿವಾರ ದೇವತೆಗಳಿಗೆ ಪೂಜಾ ಕೈಂಕರ್ಯ ನಡೆಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಗಣಪತಿ ಹೋಮ, ಆಶ್ಲೇಷ ಬಲಿ, ಸಂಜೆ ಸುದರ್ಶನ ಹೋಮ, ಆವಾಹನೆ ಮತ್ತು ಉಚ್ಚಾಟಗಳು ನಡೆದವು. ನೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಜರುಗುತ್ತಿರುವ ದೈವಿಕ ಕೈಂಕರ್ಯಗಳು ತಾ. 12ರ ಅಪರಾಹ್ನ ತನಕ ಮುಂದುವರಿಯಲಿದೆ. ಜೀರ್ಣೋದ್ಧಾರ ಸಮಿತಿ ಹಿಂದಿನ ಕಾರ್ಯದರ್ಶಿ ಜಿ. ರಾಜೇಂದ್ರ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ತಕ್ಕ ಕುಟುಂಬದ ಕೋಡಿ ಮೋಟಯ್ಯ, ಬಳ್ಳಡ್ಕ ಅಪ್ಪಾಜಿ, ನಿಡ್ಯಮಲೆ ಮೀನಾಕ್ಷಿ, ಕ್ಷೇತ್ರ ಪುರೋಹಿತ ನಾರಾಯಣಾಚಾರ್, ಉದಿಯಂಡ ಸುಭಾಷ್, ಪಟ್ಟಮಾಡ ಪೂಣಚ್ಚ ಮೊದಲಾದವರು ಪಾಲ್ಗೊಂಡಿದ್ದರು.