ಮಡಿಕೇರಿ, ಡಿ. 9: ಸಂಪಾಜೆ ಹೋಬಳಿ ಚೆಂಬು ಗ್ರಾಮದ ಪೂಮಣಿ ಹಾಗೂ ಕಿಣಿಮಣಿ ಚಾಮುಂಡಿ ದೇವಿಯ ವಾರ್ಷಿಕ ಉತ್ಸವಕ್ಕೆ ಚಾಲನೆ ದೊರೆತಿದೆ. ಭಾಗಮಂಡಲ ಶ್ರೀ ಭಗಂಡೇಶ್ವರ ಆವರಣದಲ್ಲಿ ಇರಿಸಿರುವ ಪರಂಪರಾಗತ ಭಂಡಾರವನ್ನು ತಾ. 6 ರಂದು ಚೆಂಬು ದೇವಾಲಯಕ್ಕೆ ಕೊಂಡೊಯ್ಯಲಾಯಿತು.

ರಾಜರ ಕಾಲದಿಂದ ನಡೆದು ಬಂದಿರುವ ಪದ್ಧತಿಯಂತೆ ಕುದುಪಜೆ ಹಾಗೂ ಸೂರ್ತಲೆ ಕುಟುಂಬಗಳ ಮುಖ್ಯಸ್ಥರ ಮುಂದಾಳತ್ವದಲ್ಲಿ ಭಂಡಾರದೊಂದಿಗೆ ತೆರಳಲಾಯಿತು. ಈ ವೇಳೆ ತಲಕಾವೇರಿ - ಭಾಗಮಂಡಲ ಸನ್ನಿಧಿಗಳ ತಕ್ಕ ಮುಖ್ಯಸ್ಥರು, ದೇವಾಲಯ ಅರ್ಚಕರು, ವ್ಯವಸ್ಥಾಪನಾ ಸಮಿತಿ ಪ್ರಮುಖರು ಪಾಲ್ಗೊಂಡಿದ್ದರು.

ಚೆಂಬು ದೇವತಾ ಸನ್ನಿಧಿಯಲ್ಲಿ ವಾರ್ಷಿಕೋತ್ಸವ ಬಳಿಕ, ಭಂಡಾರವನ್ನು ಸುರಕ್ಷತೆ ಸಲುವಾಗಿ ಮರಳಿ ತಂದು ಭಾಗಮಂಡಲದಲ್ಲಿ ಇರಿಸಲಾಗುತ್ತದೆ. ಉಭಯ ಕ್ಷೇತ್ರಗಳು 18 ಕಿ.ಮೀ. ಅಂತರದಲ್ಲಿದ್ದು, ವರ್ಷಂಪ್ರತಿ ಭಂಡಾರ ಕೊಂಡೊಯ್ದು, ಮರಳಿ ತಂದಿರಿಸುವದು ವಾಡಿಕೆ.