ಮೂರ್ನಾಡು, ಡಿ. 9: ಗ್ರಾಮೀಣ ಮಟ್ಟದಲ್ಲಿ ವಿದ್ಯಾಭ್ಯಾಸ ಗೈಯುವ ವಿದ್ಯಾರ್ಥಿಗಳು ಕೂಡ ದೇಶಕ್ಕೆ ಮಾದರಿಯಾಗಬಲ್ಲರು ಎಂದು ಮರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ರುಪಣೆ ಮೋಹನ್ ಹೇಳಿದರು.

ಮರಗೋಡು ಭಾರತಿ ಪದವಿಪೂರ್ವ ಕಾಲೇಜಿನಲ್ಲಿ ತಾ. 11 ರವರೆಗೆ ಆಯೋಜಿಸಲಾದ ಮೂರ್ನಾಡು ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ಶಿಬಿರವನ್ನು ಗಿಡಕ್ಕೆ ನೀರೆರೆಯುವದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಗಳಿಗೂ ಎಲ್ಲಾ ಸೌಲಭ್ಯಗಳು ಸಿಗುತ್ತಿದ್ದು, ಸದುಪಯೋಗ ಪಡಿಸಿಕೊಂಡು ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳುವದರೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳುವಂತಾಗಬೇಕು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಭಾರತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಹೆಚ್.ಬಿ. ಬೆಳ್ಯಪ್ಪ ಮಾತನಾಡಿ, ಆದರ್ಶ ಜೀವನಕ್ಕೆ ರಾಷ್ಟ್ರೀಯ ಸೇವಾ ಯೋಜನೆ ಅಡಿಪಾಯವಾಗಿದೆ. ಎಲ್ಲಾ ವಿದ್ಯಾರ್ಥಿಗಳು ಎನ್‍ಎಸ್ ಎಸ್‍ನಲ್ಲಿ ವ್ಯಕ್ತಿತ್ವ ಬೆಳವಣಿಗೆಯ ಅಂಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ವಹಿಸಿ ಮಾತನಾಡಿ, ವ್ಯಕ್ತಿತ್ವ ಬೆಳವಣಿಗೆಗೆ ಕೇಳುವದು ಒಂದು ಉತ್ತಮ ಸಾಧನವಾಗಿದೆ. ಮನವಿಟ್ಟು ಕೇಳುವದು ಒಂದು ಕಲೆಯಾಗಿದ್ದು ಅದನ್ನು ಅನುಷ್ಟಾನ ಗೊಳಿಸಿ ಕೊಂಡಾಗ ಸಮಾಜದಲ್ಲಿ ಸದೃಢ ಬೆಳವಣಿಗೆ ಕಂಡುಕೊಳ್ಳಬಹುದು ಎಂದರು.

ಮೂರ್ನಾಡು ವಿದ್ಯಾಸಂಸ್ಥೆಯ ನಿರ್ದೇಶಕ ಪೆಮ್ಮುಡಿಯಂಡ ವೇಣು ಅಪ್ಪಣ್ಣ ಧ್ವಜಾರೋಹಣ ನೆರವೇರಿಸಿ ದರು. ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಮಣಿ ಶಿಬಿರಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವೇದಿಕೆಯಲ್ಲಿ ಮರಗೋಡು ಫಾರ್ಮರ್ಸ್ ಡೆವಲಪ್‍ಮೆಂಟ್ ಮತ್ತು ರಿಕ್ರಿಯೇಶನ್ ಕ್ಲಬ್‍ನ ಅಧ್ಯಕ್ಷ ಬಿದ್ರುಪಣೆ ವಿಶ್ವನಾಥ್, ಭಾರತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎಂ.ಪಿ. ವೀಣಾ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನೆರ್ಪಂಡ ಹರ್ಷ ಮಂದಣ್ಣ ಉಪಸ್ಥಿತರಿದ್ದರು.

ಶಿಬಿರಾರ್ಥಿ ಗೌರಮ್ಮ ಸ್ವಾಗತಿಸಿ, ಪ್ರಾಧ್ಯಾಪಕಿ ಕಲ್ಪನಾ ಸಾಮ್ರಾಟ್ ಕಾರ್ಯಕ್ರಮ ನಿರೂಪಿಸಿ, ಶಿಬಿರಾರ್ಥಿ ಯಶೋಧ ವಂದಿಸಿದರು.