*ಗೋಣಿಕೊಪ್ಪಲು, ಡಿ. 9: ಪದವಿಪೂರ್ವ ಶಿಕ್ಷಣ ಮುಗಿದ ಬಳಿಕ ಉದ್ಯೋಗ ಅವಕಾಶಗಳು ವಿಫುಲ ವಾಗಿವೆ. ವ್ಯಾಸಂಗದ ಅವಧಿ ಯಲ್ಲಿಯೇ ವಿದ್ಯಾರ್ಥಿಗಳು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಂಡರೆ ಉದ್ಯೋಗದ ಬಗ್ಗೆ ಮಾಹಿತಿ ಲಭ್ಯವಾಗಲಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಜಗನ್ನಾಥ್ ಹೇಳಿದರು.

ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಹೆಸರು ನೋಂದಾಯಿಸಿಕೊಂಡ ಅವರು ಪೊಲೀಸ್, ಅಬಕಾರಿ, ಅರಣ್ಯ ಇಲಾಖೆಯ ಗಾರ್ಡ್ ಹುದ್ದೆಗಳಿಗೆ ಬಹಳಷ್ಟು ಬೇಡಿಕೆ ಇದೆ. ಅರಣ್ಯ ಇಲಾಖೆಯ ಗಾರ್ಡ್ ಹುದ್ದೆಗೆ ಜಿಲ್ಲಾಮಟ್ಟದ ನೇಮಕಾತಿ ಸಮಿತಿ ಅರ್ಹರನ್ನು ಆಯ್ಕೆಮಾಡಲಿದೆ. ಆದರೆ ಕೊಡಗು ಜಿಲ್ಲೆಯವರೇ ಇದಕ್ಕೆ ಅರ್ಜಿ ಸಲ್ಲಿಸಲು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

17.5 ರ ವಯೋಮಿತಿಯಿಂದ 23 ವರ್ಷದ ವರೆಗಿನ ದೇಹದಾಡ್ಯ ಸದೃಢವಾಗಿದ್ದು, ಉತ್ತಮ ಆರೋಗ್ಯವಂತ ಯುವಕರು ಸೇನೆಗೆ ಸೇರಬಹುದು. 18 ರಿಂದ 27 ವರ್ಷದೊಳಗಿನ ಯುವಕರು ಸಿವಿಲ್ ಹಾಗೂ ಕೆಎಸ್‍ಆರ್‍ಪಿ ಪೊಲೀಸ್ ಹುದ್ದೆಗೆ ಯತ್ನಿಸಬಹುದು. ಪಿ.ಯು. ವಿಭಾಗದ ಕಲಾ ವಿದ್ಯಾರ್ಥಿಗಳಿಗೆ ಇದು ಅನುಕೂಲವಾಗಲಿದೆ ಎಂದು ಹೇಳಿದರು.

ಪ್ರಾಂಶುಪಾಲೆ ಕೆ.ಪಿ. ಪೊನ್ನಮ್ಮ ಮಾತನಾಡಿ, ಪದವಿಪೂರ್ವ ಶಿಕ್ಷಣದಲ್ಲಿ ಕಲಾ ವಿಭಾಗವನ್ನು ತುಚ್ಚವಾಗಿ ನೋಡಲಾಗುತ್ತಿದೆ. ಅದೊಂದು ಪ್ರಯೋಜನಕ್ಕೆ ಬಾರದ ಅಧ್ಯಯನ ಎಂದು ಕೆಲವರು ಮೂಗು ಮುರಿಯುತ್ತಾರೆ. ಆದರೆ ಕೆಎಎಸ್, ಐಎಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಲಾ ವಿಭಾಗದ ಭೋಗೊಳಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ, ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ ವಿಷಯಗಳ ಅಧ್ಯಯನ ಹೆಚ್ಚು ಸಹಕಾರಿಯಾಗಲಿದೆ. ಕಲಾ ವಿಭಾಗದ ವಿದ್ಯಾರ್ಥಿಗಳು ಯಾವದೇ ಕೀಳರಿಮೆ ಒಳಗಾಗದೆ ಉತ್ತಮವಾಗಿ ಓದಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಸಫಲತೆ ಕಾಣುವಂತಾಗಬೇಕು ಎಂದು ಆಶಿಸಿದರು. ಉದ್ಯೋಗ ವಿನಿಮಯ ಕಚೇರಿಯ ವಿಠಲ, ಉಪನ್ಯಾಸಕರಾದ ಡಾ. ಜೆ. ಸೋಮಣ್ಣ, ಎನ್.ಕೆ. ಪ್ರಭು, ಬಿ.ಯು. ಪ್ರತಿಭಾ ಉತ್ತಪ್ಪ ಹಾಜರಿದ್ದರು.