ಸೋಮವಾರಪೇಟೆ, ಡಿ. 7: ಸಮೀಪದ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ತಲ್ತರೆಶೆಟ್ಟಳ್ಳಿ ಗ್ರಾಮದಲ್ಲಿ ಸಾರ್ವಜನಿಕರು ನಡೆದಾಡುವ ದಾರಿಗೆ ಕೆಲ ವ್ಯಕ್ತಿಗಳು ಬೇಲಿ ಹಾಕಿದ್ದು, ತಕ್ಷಣ ಈ ಬಗ್ಗೆ ಸ್ಥಳಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರ್‍ಗೆ ದೂರು ನೀಡಲಾಗಿದೆ.

ತಲ್ತರೆಶೆಟ್ಟಳ್ಳಿ ಗ್ರಾಮದ ಸುಮಾರು 15 ರಿಂದ 20 ಕುಟುಂಬಗಳಿಗೆ ಸೇರಿದ ಗದ್ದೆ, ತೋಟಗಳಿಗೆ ತೆರಳಲು ಈ ಹಿಂದಿನಿಂದಲೂ ದಾರಿಯಿದ್ದು, ಇದೀಗ ಗ್ರಾಮದ ಬಸಪ್ಪ ಮತ್ತು ಮೋಹನ ಎಂಬವರುಗಳು ದಿಢೀರ್ ಬೇಲಿ ಹಾಕಿದ್ದಾರೆ. ಇದರಿಂದಾಗಿ ನಮಗಳಿಗೆ ಗದ್ದೆ, ತೋಟಗಳಿಗೆ ತೆರಳಲು ಅಸಾಧ್ಯವಾಗಿದೆ ಎಂದು ಗ್ರಾಮದ ಗುರಪ್ಪ, ಇಂದಿರಾ, ಸೋಮಯ್ಯ, ಕಾಳಪ್ಪ ಸೇರಿದಂತೆ ಇತರರು ತಹಶೀಲ್ದಾರ್‍ಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.

ಕಳೆದ 1984ರಿಂದಲೂ ದಾರಿ ವಿಚಾರದಲ್ಲಿ ಕಿರುಕುಳ ನೀಡುತ್ತಿದ್ದು, ಆಗ ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆಯನ್ನು ಬರೆದುಕೊಟ್ಟಿದ್ದಾರೆ.

ಆದರೂ ಆಗಾಗ್ಗೆ ದಾರಿಗೆ ತಡೆಯೊಡ್ಡುತ್ತಿದ್ದು, ಸ್ಥಳಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.