ಕುಶಾಲನಗರ, ಡಿ. 7: ಕುಶಾಲನಗರ ಗಣಪತಿ ದೇವಾಲಯ ಜಾತ್ರೋತ್ಸವ ಅಂಗವಾಗಿ ಆಯೋಜಿಸಿದ್ದ 98ನೇ ಗೋ ಪ್ರದರ್ಶನ ಶುಕ್ರವಾರ ತೆರೆಕಂಡಿತು. 3 ದಿನಗಳ ಕಾಲ ನಡೆದ ದನಗಳ ಜಾತ್ರೆಯಲ್ಲಿ ಪಾಲ್ಗೊಂಡಿದ್ದ 100ಕ್ಕೂ ಅಧಿಕ ರಾಸುಗಳ ಪ್ರದರ್ಶನದೊಂದಿಗೆ ಉತ್ತಮ ತಳಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ವಿವಿಧ ತಳಿಗಳ ಕಡಸುಗಳು, ಹಸುಗಳು, ಕರುಗಳು ಸೇರಿದಂತೆ ಸಾಕುಪ್ರಾಣಿಗಳಾದ ನಾಯಿ, ಕೋಳಿ, ಕುರಿಗಳ ಪ್ರದರ್ಶನ ಕೂಡ ನೋಡುಗರ ಮನ ಸೆಳೆಯಿತು.
ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಜೋಡು ಎತ್ತುಗಳು, ಹಳ್ಳಿಕಾರು ಬೀಜದ ಹೋರಿಗಳು, ಕಡಸುಗಳು, ಜೋಡಿ ಹಳ್ಳಿಕಾರ್ ಕಡಸುಗಳು, ಮಿಶ್ರತಳಿ ಹಸುಗಳ ವಿವಿಧ ವಿಭಾಗಗಳ ಮೂಲಕ ಪಶುವೈದ್ಯಾಧಿಕಾರಿಗಳು ಆಯ್ಕೆಗೊಳಿಸಿದರು.
ಗೋಪ್ರದರ್ಶನದಲ್ಲಿ ಕೆಲವು ಸಾಕುಪ್ರಾಣಿಗಳ ಪ್ರದರ್ಶನ ಕೂಡ ಕಂಡುಬಂತು. 15ಕ್ಕೂ ಅಧಿಕ ತಳಿಯ ನಾಯಿಗಳು, ಕುರಿ, ಫೈಟರ್ ಕೋಳಿಗಳು ಪಾಲ್ಗೊಂಡಿದ್ದವು.
ಪಶುವೈದ್ಯ ಇಲಾಖೆ ಅಧಿಕಾರಿಗ Àಳಾದ ಡಾ.ಸಂಜೀವಕುಮಾರ್ ಶಿಂಧೆ, ಡಾ. ಎಸ್.ಎಸ್.ಆನಂದ್, ಡಾ. ಚಾಮರಾಜು, ಡಾ.ನಾಗರಾಜ್, ಡಾ.ಭಾನುಪ್ರಕಾಶ್, ಜಾನುವಾರು ಅಧಿಕಾರಿ ಮತ್ತು ಪರೀಕ್ಷಕರಾದ ರಾಜ್‍ಕುಮಾರ್, ಸುರೇಶ್ ರಾಸುಗಳನ್ನು ಪರಿಶೀಲಿಸಿ ಆಯ್ಕೆ ಪ್ರಕ್ರಿಯೆ ನಡೆಸಿದರು.
ಸಾಕು ಪ್ರಾಣಿಗಳ ವಿಭಾಗದಲ್ಲಿ ಮುಧೋಳ್, ಸನ್‍ಬರ್ನಾಡ್, ಜರ್ಮನ್ ಶೆಫರ್ಡ್, ಪಗ್, ರಾಟ್‍ವೀಲರ್, ಲಾಶಾಪ್ಸೊ ತಳಿಗಳ ನಾಯಿಗಳು ಸೇರಿದಂತೆ ಸಾಮಾನ್ಯ ಜಾತಿಯ ನಾಯಿಗಳು, ತಮಿಳುನಾಡಿನ ಫೈಟರ್ ಕೋಳಿಗಳ ಪ್ರದರ್ಶನ ಸಾರ್ವಜನಿಕರನ್ನು ಆಕರ್ಷಿಸಿತು.
ಈ ಸಂದರ್ಭ ದೇವಾಲಯ ಸಮಿತಿ ಕಾರ್ಯದರ್ಶಿ ಎಸ್.ಕೆ. ಶ್ರೀನಿವಾಸರಾವ್, ನಿರ್ದೇಶಕರುಗಳಾದ ಬಿ.ಕೆ.ಮುತ್ತಣ್ಣ, ಎಂ.ವಿ.ನಾರಾಯಣ್, ಜಿ.ಎಲ್.ನಾಗರಾಜ್, ಡಿ.ಅಪ್ಪಣ್ಣ ಮತ್ತಿತರರು ಇದ್ದರು.
ಸಂಜೆ ಗೋ ಪ್ರದರ್ಶನದ ಸ್ಪರ್ಧೆಯಲ್ಲಿ ಬಹುಮಾನ ಪಡೆದ ರಾಸುಗಳ ಮಾಲೀಕರಿಗೆ ದೇವಾಲಯದ ವತಿಯಿಂದ ಬಹುಮಾನಗಳನ್ನು ವಿತರಿಸಲಾಯಿತು.
ಕುಶಾಲನಗರ ಹೋಬಳಿ ವ್ಯಾಪ್ತಿ ಮತ್ತು ಸುತ್ತಮುತ್ತಲ ರೈತರ ಜಾನುವಾರುಗಳ ಪ್ರದರ್ಶನ ಮೇಳಕ್ಕೆ ಐತಿಹಾಸಿಕ ಶ್ರೀ ಗಣಪತಿ ದೇವಾಲಯ ಜಾತ್ರೆ ಮೂಲಕ ವೇದಿಕೆ ನಿರ್ಮಿಸುವ ಮೂಲಕ ಗೋ ಪ್ರದರ್ಶನ ಮತ್ತು ಜಾತ್ರಾ ವೈಭವ ಮತ್ತೆ ಮರುಕಳಿಸುವಂತೆ ಮಾಡಿದೆ.
ಈ ಬಾರಿ ರಥೋತ್ಸವ ಅಂಗವಾಗಿ ವಿಶೇಷವಾಗಿ 3 ದಿನಗಳ ಕಾಲ ಜಾತ್ರಾ ಮೈದಾನದಲ್ಲಿ ದನಗಳ ಜಾತ್ರೆ ಹಮ್ಮಿಕೊಳ್ಳುವ ಮೂಲಕ 100 ಕ್ಕೂ ಅಧಿಕ ರಾಸುಗಳಿಗೆ ತಮ್ಮ ಮಾಲೀಕರೊಂದಿಗೆ ಗೋ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿದಂತಾಗಿದೆ.
98ನೇ ಗೋಪ್ರದರ್ಶನ ಕಾರ್ಯಕ್ರಮದಲ್ಲಿ ಪಟ್ಟಣದ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಾದ ಕೂಡಿಗೆ, ಕಣಿವೆ, ಹುಲುಸೆ, ಹೆಬ್ಬಾಲೆ, ಶಿರಂಗಾಲ, ಆವರ್ತಿ, ಕಮರವಳ್ಳಿ ಸೇರಿದಂತೆ ವಿವಿಧೆಡೆಗಳಿಂದ ಜೋಡು ಎತ್ತುಗಳು, ಹಳ್ಳಿಕಾರು ಬೀಜದ ಹೋರಿಗಳು, ಕಡಸುಗಳು, ಜೋಡಿ ಹಳ್ಳಿಕಾರ್ ಕಡಸುಗಳು, ಮಿಶ್ರತಳಿ ಸೇರಿದಂತೆ ವಿವಿಧ ತಳಿಯ ರಾಸುಗಳು 3 ದಿನಗಳ ಕಾಲ ಪಾಲ್ಗೊಂಡಿದ್ದು ವಿಶೇಷ ಎನ್ನಬಹುದು.
ಪ್ರತಿ ಬಾರಿ ಗೋಪ್ರದರ್ಶನ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿತ್ತು. ರೈತಾಪಿ ವರ್ಗವನ್ನು ಪ್ರೋತ್ಸಾಹಿಸುವ ಸಲುವಾಗಿ ಗಣಪತಿ ದೇವಾಲಯ ಸಮಿತಿ ಮೂಲಕ ರಚನೆಗೊಂಡ ದನಗಳ ಜಾತ್ರೆ ಉಪ ಸಮಿತಿಯಿಂದ 3 ದಿನಗಳ ಕಾಲ ಪ್ರದರ್ಶನಕ್ಕೆ ಅವಕಾಶ ನೀಡಲಾಯಿತು. ಜಾತ್ರಾ ಮೈದಾನದಲ್ಲಿ ಎಲ್ಲಾ ಮೂಲಭೂತ ವ್ಯವಸ್ಥೆ ಕಲ್ಪಿಸುವ ದರೊಂದಿಗೆ ರಾಸುಗಳು ಹಾಗೂ ಅದರ ಮಾಲೀಕರಿಗೆ ಉಚಿತವಾಗಿ ಊಟೋಪಚಾರ ಮತ್ತು ರಾಸುಗಳ ಪ್ರದರ್ಶನಕ್ಕೆ ಶೆಡ್‍ಗಳನ್ನು ನಿರ್ಮಿಸಲಾಗಿತ್ತು. ದಿನದ 24 ಗಂಟೆ ಕಾಲ ಜಾನುವಾರುಗಳಿಗೆ ಕುಡಿಯಲು ನೀರು, ಮೇವು ಹಾಗೂ ಪಶು ವೈದ್ಯಕೀಯ ಸೌಲಭ್ಯ ಕೂಡ ನೀಡಲಾಗಿತ್ತು.
ಈ ಬಾರಿ ವಿವಿಧ ಕಲಾತಂಡಗಳ ಸಾಂಸ್ಕøತಿಕ ದಿಬ್ಬಣದೊಂದಿಗೆ ಜಾತ್ರೆಗೆ ಇನ್ನೊಂದು ರೀತಿಯ ಮೆರುಗು ಕೂಡ ನೀಡುವಲ್ಲಿ ದೇವಾಲಯ ಸಮಿತಿ ಯಶಸ್ಸು ಕಂಡಿದೆ. ಜಿಲ್ಲೆಯಲ್ಲಿ ರೈತಾಪಿ ವರ್ಗಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಾಗೂ ವಿವಿಧ ತಳಿಗಳ ರಾಸುಗಳನ್ನು ಪರಿಚಯಿಸುವ ಒಂದು ಪ್ರಯತ್ನ ಇದಾಗಿದೆ. ಆ ಮೂಲಕ ಪರಂಪರೆಯನ್ನು ಬಿಂಬಿಸುವದು ಈ ಗೋಪ್ರದರ್ಶನದ ಪ್ರಮುಖ ಉದ್ದೇಶವಾಗಿದೆ ಎಂದು ಗಣಪತಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ವಿ.ಎನ್.ವಸಂತಕುಮಾರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.