ಕೂಡಿಗೆ, ಡಿ. 7: ಇಲ್ಲಿಗೆ ಸಮೀಪದ ನೇರುಗಳಲೆ (ಅಬ್ಬೂರ್‍ಕಟ್ಟೆ) ಗ್ರಾ.ಪಂ ವ್ಯಾಪ್ತಿಯ ಹಿತ್ತಲಮತ್ತಿ ಗ್ರಾಮದ ಹಾಡಿಯಲ್ಲಿರುವ ಎಂಟು ಕುಟುಂಬಗಳಿಗೆ ಸರಕಾರದ ವತಿಯಿಂದ ನೀಡಲಾಗಿರುವ ಹಕ್ಕುಪತ್ರಗಳಿದ್ದರೂ ಮನೆ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಅಡ್ಡಿಯಾಗುತ್ತಿದೆ ಎಂದು ಬಸವನಹಳ್ಳಿ ವಿವಿಧೋದ್ದೇಶ ಸಹಕಾರ ಬ್ಯಾಂಕಿನ ಅಧ್ಯಕ್ಷ ಎಸ್.ಎನ್. ರಾಜಾರಾವ್ ಆರೋಪಿಸಿದ್ದಾರೆ.

ಈ ಹಾಡಿಯಲ್ಲಿರುವ ಎಂಟು ಕುಟುಂಬಗಳಿಗೆ ತಲಾ ನಾಲ್ಕುವರೆ ಸೆಂಟ್ ಜಾಗಕ್ಕೆ ಕೆಲವು ವರ್ಷಗಳ ಹಿಂದೆ ಹಕ್ಕುಪತ್ರ ನೀಡಲಾಗಿದೆ. ಹಕ್ಕುಪತ್ರ ಇರುವ ಕುಟುಂಬದವರು, ಇವರಿಗೆ ಮೀಸಲಿರುವ ಜಾಗದಲ್ಲಿ ಎರಡು ಸೆಂಟ್ ಜಾಗದಲ್ಲಿ ಮನೆ ನಿರ್ಮಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಅರಣ್ಯ ಕಾಯ್ದೆಯ ನಿಯಮದ ಪ್ರಕಾರ 2008ರಲ್ಲಿ ಅವರು ವಾಸವಿದ್ದ ಜಾಗದಲ್ಲಿ ಮನೆ ನಿರ್ಮಿಸಲು ಅವಕಾಶವಿದ್ದರೂ, ಅವರುಗಳನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿರುವದು ಸರಿಯಾದ ಕ್ರಮವಲ್ಲವೆಂದು ರಾಜಾರಾವ್ ಆರೋಪಿಸಿದ್ದಾರೆ.

1980ರ ಅರಣ್ಯ ಹಕ್ಕು ಕಾಯ್ದೆಯ ಪ್ರಕಾರ ಜೇನುಕುರುಬ ಕುಟುಂಬಗಳಿಗೆ ಐ.ಟಿ.ಡಿ.ಪಿ ಇಲಾಖೆಯ ಮೂಲಕ ಜೇನುಕುರುಬ ಕುಟುಂಬಗಳು ಎಲ್ಲೆಲ್ಲಿ ವಾಸವಿರುತ್ತಾರೋ ಆಯಾ ಸ್ಥಳಗಳಲ್ಲಿ ಮನೆ ನಿರ್ಮಿಸಿಕೊಡಬೇಕೆಂಬ ಇಲಾಖಾ ಸುತ್ತೋಲೆಯಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯ ಜೇನು ಕುರುಬ ಕುಟುಂಬಸ್ಥರು ಆರೋಪಿಸಿದ್ದಾರೆ. ಈಗಿರುವ ಎಂಟು ಕುಟುಂಬಗಳಿಗೆ ನೀಡಿರುವ ಹಕ್ಕುಪತ್ರದಲ್ಲಿ ನಾಲ್ಕುವರೆ ಸೆಂಟ್ ಜಾಗ ನಮೂದಿಸಿದ್ದರೂ ಈ ವ್ಯಾಪ್ತಿಯ ಅರಣ್ಯಾಧಿಕಾರಿಗಳು ಎರಡು ಸೆಂಟ್ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಿ ಎಂದು ಅರಣ್ಯ ಇಲಾಖೆಯವರು ಹೇಳುತ್ತಿದ್ದಾರೆ. ಈ ರೀತಿ ಅಡ್ಡಿಪಡಿಸಿದ್ದಲ್ಲಿ ತಾಲೂಕು ಅರಣ್ಯ ಕಚೇರಿಯ ಎದುರು ಎಂಟು ಜೇನುಕುರುಬ ಕುಟುಂಬ ಹಾಗೂ ಗಿರಿಜನ ಮುಖಂಡರೊಡನೆ ಪ್ರತಿಭಟನೆ ನಡೆಸಲಾಗುವದು ಎಂದರು.

ಸ್ಥಳಕ್ಕೆ ಜಿಲ್ಲಾ ಆದಿವಾಸಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪ್ರಕಾಶ್, ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರದ ಮುಖಂಡರಾದ ಸ್ವಾಮಿ, ನಾಯಕ್, ರಮೇಶ್, ರವಿ, ಗಜ್ಜಯ್ಯ, ನಾಗರಾಜ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಗಿರಿಜನ ಮುಖಂಡರುಗಳು ಹಿತ್ತಲಮತ್ತಿ ಜೇನುಕುರುಬ ಹಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.