ಸೋಮವಾರಪೇಟೆ, ಡಿ.8: ‘ಕಾಣದ್ದನ್ನು ಹುಡುಕಲು, ಬೇಕಾದ್ದನ್ನು ಪಡೆಯಲು, ಬಗೆಯದಿರಿ ಭೂ ತಾಯ ಒಡಲು.., ಕುಸಿದು ಬಿದ್ದಾಳು ತಾಯಿ ನಮ್ಮವ್ವ..’ ಎಂಬ ಕವಿವಾಣಿಯಂತೆಯೇ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದೆ. ಪ್ರಕೃತಿ ಶ್ರೀಮಂತಿಕೆಯ ಕೊಡಗು ಘೋರ ದುರಂತಕ್ಕೆ ತುತ್ತಾಗಿರುವದು ನಮ್ಮ ಸಣ್ಣತನ ಹಾಗೂ ಅತಿಯಾಸೆಗೆ ಕೈಗನ್ನಡಿ ಎಂದು ಮಕ್ಕಳ 2ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಕೃತಜ್ಞ ಬೆಸೂರು ಅಭಿಮತ ವ್ಯಕ್ತಪಡಿಸಿದರು.
ಜಿಲ್ಲಾ ಕಸಾಪ, ಸೋಮವಾರಪೇಟೆ ತಾಲೂಕು ಮತ್ತು ಕೊಡ್ಲಿಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್, ಕಿರಿಕೊಡ್ಲಿ ಮಠದ ಎಸ್ಜಿಎಸ್ ವಿದ್ಯಾಪೀಠದ ಆಶ್ರಯದಲ್ಲಿ ಕಿರಿಕೊಡ್ಲಿ ಮಠದ ಶಾಲಾ ಸಭಾಂಗಣದಲ್ಲಿ ನಿರ್ಮಿಸಲಾದ ಜಂಗಮರ ಶರಣ ಲಿಂಗೈಕ್ಯ ಎಸ್.ಎಸ್. ನೇಮಿರಾಜ್ ಪ್ರಧಾನ ವೇದಿಕೆಯಲ್ಲಿ ನಡೆದ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಅಕ್ರಮ ಮರಳುಗಾರಿಕೆ, ಗಣಿಗಾರಿಕೆಗಳನ್ನು ತಡೆಗಟ್ಟಬೇಕು. ಪರಿಸರ ಪ್ರಜ್ಞೆ ಮೂಡಿಸಿಕೊಳ್ಳಬೇಕು. ಮುಂದಿನ ಜನಾಂಗದ ರಾಯಭಾರಿಗಳಾದ ನಾವುಗಳು ಸಮಾಜ ಹಾಗೂ ಪರಿಸರಕ್ಕೆ ಒಳಿತು ಮಾಡಬೇಕು ಎಂದು ವಿದ್ಯಾರ್ಥಿ ಸಮೂಹಕ್ಕೆ ಕರೆ ನೀಡಿದರು.
ಶಿಕ್ಷಣ ಕ್ಷೇತ್ರದ ಬಗ್ಗೆ ತಮ್ಮ ಮಾತುಗಳಲ್ಲಿ ಗಮನ ಸೆಳೆದ ಕೃತಜ್ಞ ಅವರು, ಸಾಹಿತ್ಯ ನಮ್ಮನ್ನು ಸಾಂಸ್ಕøತಿಕವಾಗಿ ಎತ್ತರಕ್ಕೆ ಕೊಂಡೊಯ್ಯುತ್ತದೆ. ಶಾಲಾ ಕಾಲೇಜುಗಳು ವೈದ್ಯರು, ಇಂಜಿನಿಯರ್ಗಳನ್ನು ಸೃಷ್ಟಿ ಮಾಡುವ ಕಾರ್ಖಾನೆಗಳಾಗದೆ, ಮೌಲ್ಯಯುತ ಸಂಸ್ಕಾರ ಬೆಳೆಸುವ ಕೇಂದ್ರಗಳಾಗಬೇಕು. ಶಾಲೆಗಳಲ್ಲಿ ಕನ್ನಡ ಸಂಘಗಳನ್ನು ಸ್ಥಾಪಿಸಬೇಕು. ಸೃಜನಾತ್ಮಕ ಮತ್ತು ಕಲಾತ್ಮಕ ಅಭಿರುಚಿಗಳನ್ನು ಬೆಳೆಸಬೇಕು. ಮೌಲ್ಯಗಳ ವರ್ಧನೆಯಾಗಬೇಕು. ಜ್ಞಾನ ಕಟ್ಟುವ ದೇಗುಲವಾಗಬೇಕು ಎಂದರು. ನಮ್ಮೊಳಗಿನ ವ್ಯಕ್ತಿತ್ವಕ್ಕೆ ಗಟ್ಟಿ ಕವಚ ನಿರ್ಮಿಸುವ ಶಿಕ್ಷಣ ಬೇಕು. ಅಂತಹ ಶಿಕ್ಷಣ ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಬಾರದು. ಕಲೆ, ಸಾಹಿತ್ಯ, ಕ್ರೀಡೆ, ಸಂಗೀತ, ನೃತ್ಯ, ಲಲಿತ ಕಲೆ ಸೇರಿದಂತೆ ಇತರ ಕ್ಷೇತ್ರಗಳಿಗೂ ವ್ಯಾಪಿಸಬೇಕು. ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಜಾಗ್ರತೆ ವಹಿಸಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಂಕಗಳಿಕೆಯಷ್ಟೇ ಮುಖ್ಯವಾಗಬಾರದು. ಅಂಕಗಳೊಂದಿಗೆ ಆದರ್ಶಗಳನ್ನೂ ಗಳಿಸಿಕೊಳ್ಳಬೇಕು ಎಂದು ಅಭಿಲಾಷೆ ವ್ಯಕ್ತಪಡಿಸಿದರು. ವಿಜ್ಞಾನವನ್ನು ಆರಿಸಿಕೊಳ್ಳುವ ವಿದ್ಯಾರ್ಥಿಗಳು ವೈಜ್ಞಾನಿಕ ನೆಲೆಯಲ್ಲಿ ಚಿಂತಿಸುವ ಮನೋಭಾವ ಹೊಂದಿಲ್ಲ. ಮೌಢ್ಯತೆ ದೂರಾಗಬೇಕಾದರೆ ವೈಚಾರಿಕತೆ ವೈಭವಗೊಳ್ಳಬೇಕು. ಕುತೂಹಲದ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದ ಅವರು, ವಿಚಾರವಂತರ ಮೇಲಿನ ಹಲ್ಲೆಗಳು ವೈಚಾರಿಕ ದಿವಾಳಿತನಕ್ಕೆ ಸಾಕ್ಷಿ ಎಂದು ಅಭಿಪ್ರಾಯಿಸಿದರು. ಪುಸ್ತಕಗಳು ಸಾಂಸ್ಕøತಿಕ ರಾಯಭಾರಿಗಳಾಗಿದ್ದು, ಅರಿವಿನ ದೀಪಗಳಾಗಿವೆ. ಮನೆಗಳಲ್ಲಿ ಲಕ್ಷಾಂತರ ಮೌಲ್ಯದ ಪೀಠೋಪಕರಣಗಳಿಗಿಂತ ಗ್ರಂಥಾಲಯಕ್ಕೆ ಹೆಚ್ಚಿನ ಆದ್ಯತೆ ನೀಡುವಂತಾಗಬೇಕು. ತಂತ್ರಜ್ಞಾನಗಳು ಬೆಳವಣಿಗೆಗೆ ಪೂರಕವಾಗಿರಬೇಕೇ ಹೊರತು, ಮನುಷ್ಯ ಅವುಗಳಿಗೆ ಗುಲಾಮನಾಗಬಾರದು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್ಜಿಎಸ್ ವಿದ್ಯಾಪೀಠದ ಅಧ್ಯಕ್ಷರಾದ ಶ್ರೀ ಸದಾಶಿವ ಸ್ವಾಮೀಜಿ ಅವರು, ಜೀವನ ನಡೆಯಲು ಮೂಲಭೂತ ಸೌಕರ್ಯಗಳು ಎಷ್ಟು ಮುಖ್ಯವೋ ಶ್ರದ್ಧೆ, ಸಾಹಿತ್ಯ ಮತ್ತು ಸಂಸ್ಕಾರಗಳೂ ಅಷ್ಟೆ ಮುಖ್ಯವಾಗಿದೆ. ಮಕ್ಕಳಲ್ಲಿ ಸಾಹಿತ್ಯಿಕ ಒಲವು ಮೂಡಿಸಲು ಇಂತಹ ಸಮ್ಮೇಳನ ಸಹಕಾರಿಯಾಗಿದೆ. ಎಲ್ಲರೂ ತಮ್ಮ ಬದುಕನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಸಂಸ್ಕಾರ ಮತ್ತು ಸಾಹಿತ್ಯವಂತರಾಗಬೇಕು ಎಂದು ಕಿವಿಮಾತು ನುಡಿದರು.
ಮುಖ್ಯ ಅತಿಥಿಯಾಗಿದ್ದ ಉಚ್ಚನ್ಯಾಯಾಲಯದ ಸರ್ಕಾರಿ ಅಭಿಯೋಜಕ ಹೆಚ್.ಎಸ್. ಚಂದ್ರಮೌಳಿ ಮಾತನಾಡಿ, ಮಕ್ಕಳ ಪ್ರತಿಭೆಗೆ ಪೋಷಕರೊಂದಿಗೆ ಸಮಾಜವೂ ಪ್ರೋತ್ಸಾಹ ನೀಡಬೇಕು. ಮುಗ್ಧ ಮನಸ್ಸುಗಳನ್ನು ಸರಿದಾರಿಯಲ್ಲಿ ಕೊಂಡೊಯ್ಯಬೇಕು. ಸಾಮಾಜಿಕ ಜಾಲತಾಣಗಳಿಂದ ಮಕ್ಕಳ ಮನಸ್ಸು ಕದಡುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚುತ್ತಿರುವ ಬಗ್ಗೆ ಜಾಗ್ರತೆ ವಹಿಸಬೇಕು ಎಂದರು. ಸಾಮಾಜಿಕ ಜಾಲತಾಣಗಳು ಇತ್ತೀಚಿನ ದಿನಗಳಲ್ಲಿ ಸಮಾಜದ ವಿನಾಶಕ್ಕೆ ಕಾರಣವಾಗುತ್ತಿದೆಯೇ ಎಂಬ ಬಗ್ಗೆ ಆಲೋಚಿಸಬೇಕಿದೆ ಎಂದ ಚಂದ್ರಮೌಳಿ ಅವರು, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸರಿದಾರಿಯಲ್ಲಿ ಪ್ರೋತ್ಸಾಹಿಸಬೇಕು. ಶಿಕ್ಷಣ ಆರೋಗ್ಯ ಸೌಕರ್ಯ ಕಲ್ಪಿಸುವದರೊಂದಿಗೆ ಮಕ್ಕಳ ಸಾಂವಿಧಾನಿಕ ಹಕ್ಕುಗಳ ರಕ್ಷಣೆಯಾಗಬೇಕು ಎಂದರು.
ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್ ಮಾತನಾಡಿ, ಕನ್ನಡಪರ ಕಾರ್ಯಚಟುವಟಿಕೆಗಳಿಗೆ ತಾಲೂಕು ಪಂಚಾಯಿತಿಯಿಂದ ಹೆಚ್ಚಿನ ಸಹಕಾರ ನೀಡಲಾಗುವದು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್, ವಿದ್ಯಾರ್ಥಿ ಜೀವನದಲ್ಲಿಯೇ ಕನ್ನಡ ಸಾಹಿತ್ಯ, ನಾಡು ನುಡಿ, ಕಲೆ, ಸಂಸ್ಕøತಿ ಬಗ್ಗೆ ಅಭಿಮಾನ ಮೂಡಿಸುವ ಉದ್ದೇಶದಿಂದ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.
ತಾ.ಪಂ. ಸದಸ್ಯ ಕುಶಾಲಪ್ಪ, ಕೊಡ್ಲಿಪೇಟೆ ಗ್ರಾ.ಪಂ. ಅಧ್ಯಕ್ಷೆ ರೋಹಿಣಿ, ಬೆಸೂರು ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ, ಹಂಡ್ಲಿ ಗ್ರಾ.ಪಂ. ಅಧ್ಯಕ್ಷ ಸಂದೀಪ್ ಅವರುಗಳು ಮಾತನಾಡಿದರು. ವೇದಿಕೆಯಲ್ಲಿ ಮಾಜೀ ಸಚಿವ ಬಿ.ಎ. ಜೀವಿಜಯ, ಪ್ರಧಾನ ವೇದಿಕೆ ಉದ್ಘಾಟಿಸಿದ ಜಿ. ದಿಶಾಂಕ್, ಕಸಾಪ ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಸೋಮವಾರಪೇಟೆ ಅಧ್ಯಕ್ಷ ಎಸ್.ಡಿ. ವಿಜೇತ್, ಕೊಡ್ಲಿಪೇಟೆ ಹೋಬಳಿ ಅಧ್ಯಕ್ಷ ಅಬ್ದುಲ್ ರಬ್, ಜಿ.ಪಂ. ಸದಸ್ಯ ಪುಟ್ಟರಾಜು, ಬ್ಯಾಡಗೊಟ್ಟ ಗ್ರಾ.ಪಂ. ಅಧ್ಯಕ್ಷೆ ನಿರ್ಮಲ ಸುಂದರ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ, ಕಸಾಪ ಮಾಧ್ಯಮ ಕಾರ್ಯದರ್ಶಿ ಅಶ್ವಥ್ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.