ಸೋಮವಾರಪೇಟೆ, ಡಿ. 8: ಜಿಲ್ಲಾ ಕಸಾಪ, ಸೋಮವಾರಪೇಟೆ ತಾಲೂಕು ಮತ್ತು ಕೊಡ್ಲಿಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್, ಕಿರಿಕೊಡ್ಲಿ ಮಠದ ಎಸ್‍ಜಿಎಸ್ ವಿದ್ಯಾಪೀಠದ ಆಶ್ರಯದಲ್ಲಿ ಕಿರಿಕೊಡ್ಲಿ ಮಠದ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಕ್ಕಳ 2ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಕ್ಕಳಿಂದ ಮಕ್ಕಳಿಗಾಗಿಯೇ ನಡೆದು ಯಶಸ್ಸು ಕಂಡಿತು.

ಕನ್ನಡ ಸಾಹಿತ್ಯ ಪರಿಷತ್‍ನ ಪದಾಧಿಕಾರಿಗಳು ಕಾರ್ಯಕ್ರಮವನ್ನು ಆಯೋಜಿಸಿದ್ದರೂ ಸಹ, ಪ್ರತಿಯೊಂದು ಕಾರ್ಯಕ್ರಮ, ಕವಿಗೋಷ್ಠಿ, ಗೀತಗಾಯನ, ವಿಚಾರ ಗೋಷ್ಠಿಗಳು ವಿದ್ಯಾರ್ಥಿಗಳ ಭಾಗವಹಿಸುವಿಕೆಯಿಂದ ಅರ್ಥ ಪೂರ್ಣವಾಗಿ ಸಮ್ಮೇಳನ ನಡೆಯಿತು. ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಿಂದ ಹಿಡಿದು ಸಮಾರೋಪ ಸಮಾರಂಭ ದವರೆಗೂ ವಿದ್ಯಾರ್ಥಿಗಳೇ ಕಾರ್ಯಕ್ರಮ ನಿರ್ವಹಿಸಿದರು.

ಮೆರವಣಿಗೆ, ವಿವಿಧ ದ್ವಾರಗಳು, ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆ, ಸುದ್ದಿಮನೆ, ಪ್ರಧಾನ ವೇದಿಕೆ, ಗೀತಗಾಯನ, ಕವಿಗೋಷ್ಠಿ, ವಿಚಾರಗೋಷ್ಠಿಗಳನ್ನು ಮಕ್ಕಳೇ ನಿರ್ವಹಿಸುವ ಮೂಲಕ ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬ ಮಾತಿಗೆ ಅರ್ಥ ಕಲ್ಪಿಸಿದರು. ಸಾಹಿತ್ಯ, ಸಂಗೀತ ಜ್ಞಾನ-ಕಲೆಯನ್ನು ವೇದಿಕೆಯಲ್ಲಿ ಪ್ರದರ್ಶಿಸುವ ಮೂಲಕ ಸಮ್ಮೇಳನದ ಯಶಸ್ಸಿಗೆ ಕಾರಣಕರ್ತರಾದರು.

ಗೀತಗಾಯನ: ಸಮ್ಮೇಳನದಲ್ಲಿ ಆಯೋಜಿಸಿದ್ದ ಗೀತಗಾಯನ ಕಾರ್ಯಕ್ರಮವನ್ನು ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆಯ ಎಂ.ಡಿ. ಆಯುಷ್ ಉದ್ಘಾಟಿಸಿದರು. ಸಿ.ಪಿ. ಚಂದನ್, ಮೋನಿಷ, ಉಲ್ಲಾಸ್, ತಾನ್ಯ ಮುರಳೀಧರ್, ತರುಣ್, ತನುಶ್ರೀ, ತನ್ವೀರ್, ಲೇಖಾಂತ್, ರೋಜ್‍ಮೇರಿ, ಕಾವ್ಯಶ್ರೀ, ಗೋಕರ್ಣ ಮತ್ತು ತಂಡ, ದಿಶೀಲ್, ವಿಜಯ್‍ಕುಮಾರ್, ಭವಿಷ್ಯ, ಶ್ರೀಲಕ್ಷ್ಮೀ ಅವರುಗಳು ತಮ್ಮ ಸುಮಧುರ ಕಂಠದಿಂದ ಹಾಡಿದರು.

ಕವಿಗೋಷ್ಠಿ: ನಂತರ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕಿರಿಕೊಡ್ಲಿ ಎಸ್‍ಎಸ್ ಕಾಲೇಜಿನ ಅನನ್ಯ ವಹಿಸಿದ್ದರು. ಜಿ.ಪಂ. ಮಾಜೀ ಅಧ್ಯಕ್ಷೆ ಜಯಮ್ಮ, ಕಸಾಪ ಪದಾಧಿಕಾರಿಗಳಾದ ಸೋಮಪ್ಪ, ಜಾನಕಿ, ಪಂಕಜ, ರಿಜ್ವಾನಾ ಬಾನು, ಲೋಲಾಕ್ಷಿ, ಯಶೋಧ ಅವರುಗಳು ಉಪಸ್ಥಿತರಿದ್ದರು. ಬಾಲಕವಿಗಳಾದ ಆದಿತ್ಯ, ವಿನಿತ, ಹರ್ಷಿತ, ರಕ್ಷಿತ್, ಚತುರ್ಥ, ಮನೋಜ್, ಹರ್ಷಿತ್, ಕವನವಾಸು, ಕಾವ್ಯಶ್ರೀ, ಪವನ್, ಸುನಿಲ್ ಅವರುಗಳು ಕವನ ವಾಚಿಸಿದರು. ವಿದ್ಯಾರ್ಥಿಗಳಾದ ಸೃಷ್ಟಿ ಮತ್ತು ಪವಿತ್ರ ಕಾರ್ಯಕ್ರಮ ನಿರ್ವಹಿಸಿದರು. ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸುಧನ್ವ, ‘ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ’ ಗೀತೆಯನ್ನು ಪಿಯಾನೋ ದಲ್ಲಿ ನುಡಿಸುವ ಮೂಲಕ ಎಲ್ಲರ ಗಮನ ಸೆಳೆದರು.