ಮಡಿಕೇರಿ, ಡಿ. 8: ಬೆಂಗಳೂರಿನ ಮಾದಾಪುರದಿಂದ ಗೂಡ್ಸ್ ವಾಹನ ಅಪಹರಿಸಿ ಮಡಿಕೇರಿಗೆ ತರುತ್ತಿದ್ದ ಮೂವರು ಆರೋಪಿಗಳನ್ನು ಹುಣಸೂರು ಪೊಲೀಸ್ ಠಾಣಾಧಿಕಾರಿ ಮಹೇಶ್ ಹಾಗೂ ಸಿಬ್ಬಂದಿ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಂದಾಜು ರೂ. 12 ಲಕ್ಷ ಮೌಲ್ಯದ ಐಚರ್ ಗೂಡ್ಸ್ ವಾಹನ (ಕೆ.ಎ. 51- ಎಸಿ 5942) ಅನ್ನು ಗುರುವಾರ ಮಧ್ಯರಾತ್ರಿ ಹೆದ್ದಾರಿಯಲ್ಲಿ ಪೊಲೀಸರು ತಡೆದು ತಪಾಸಣೆಗೆ ಒಳಪಡಿಸಿದ್ದಾರೆ. ಈ ವೇಳೆ ಮಡಿಕೇರಿಯ ಆರೋಪಿ ರವಿಕಾವೇರಪ್ಪ (29) ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಆತನನ್ನು ಬೆನ್ನಟ್ಟಿ ಸೆರೆ ಹಿಡಿಯಲಾಗಿದೆ. ಈತನೊಂದಿಗೆ ಪ್ರದೀಪ್ ಸುಬ್ರಮಣ್ಯ ಹಾಗೂ ಕುಮಾರ್ ಸುಧಾಕರ್‍ನನ್ನು ಕೂಡ ಬಂಧಿಸಲಾಗಿದೆ.
ಬೆಂಗಳೂರಿನ ಮಾದಾವರದಲ್ಲಿ ರಾತ್ರಿ ವೇಳೆ ಮನೆಯ ಮುಂಭಾಗ ರಸ್ತೆ ಬದಿ ನಿಲ್ಲಿಸಿದ್ದ ಈ ವಾಹನವನ್ನು ಕಳ್ಳತನ ಮಾಡಿ ಮಾರಾಟ ಮಾಡಲು ಸಂಚು ರೂಪಿಸಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಹುಣಸೂರು ಠಾಣಾಧಿಕಾರಿ ಮಹೇಶ್ ಸುಳಿವು ನೀಡಿದ್ದಾರೆ. ಬಂಧಿತರಲ್ಲಿ ಆರೋಪಿ ರವಿಯು ಮಡಿಕೇರಿಯ ಸ್ಟೀವರ್ಟ್‍ಹಿಲ್ ಕೆಳಗಿನ ರಿಮ್ಯಾಂಡ್‍ಹೋಮ್ ಹಿಂಭಾಗದ ನಿವಾಸಿಯಾಗಿದ್ದು, ಪ್ರದೀಪ್ ರಾಣಿಪೇಟೆ ಮತ್ತು ಕುಮಾರ್ ಕನ್ನಂಡಬಾಣೆ ನಿವಾಸಿಯೆಂದು ಮಾಹಿತಿ ಲಭಿಸಿದೆ.