ಸಿದ್ದಾಪುರ, ಡಿ. 8: ಖಾಸಗಿ ಕಾಫಿ ತೋಟದಲ್ಲಿ ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಒತ್ತಾಯಿಸಿ ಕಾರ್ಮಿಕರು ತೋಟದಲ್ಲಿ ಮುಷ್ಕರ ಹೂಡಿ ಪ್ರತಿಭಟಿಸಿದ ಘಟನೆ ಪಾಲಿಬೆಟ್ಟದಲ್ಲಿ ನಡೆದಿದೆ. ಪಾಲಿಬೆಟ್ಟದ ದುಬಾರೆ ಚೆಟ್ಟಿನಾಡ್ ಖಾಸಗಿ ಕಾಫಿ ತೋಟದಲ್ಲಿ ಕಾರ್ಮಿಕರಿಗೆ ಸಮರ್ಪಕವಾಗಿ ವೇತನ ನೀಡುತ್ತಿಲ್ಲ, ವೈದ್ಯಕೀಯ ವೆಚ್ಚವನ್ನು ಭರಿಸುತ್ತಿಲ್ಲ, ಕಾರ್ಮಿಕರ ವಾಸದ ವಸತಿಯನ್ನು ದುರಸ್ಥಿಪಡಿಸುತ್ತಿಲ್ಲ, ಸಂಜೆ 6 ಗಂಟೆಯ ಬಳಿಕ ತೋಟದೊಳಗಿನಿಂದ ಹೊರಗಡೆ ಹೋಗದಂತೆ ಗೇಟನ್ನು ಮುಚ್ಚಿ ತೊಂದರೆ ನೀಡುತ್ತಿದ್ದಾರೆ ಅಲ್ಲದೆ ಶಾಲಾ ಮಕ್ಕಳಿಗೆ ಓಡಾಡಲು ಬಿಡುತ್ತಿಲ್ಲವೆಂದು ಆರೋಪಿಸಿ ಕಾರ್ಮಿಕರು ತೋಟದ ಮಾಲೀಕರ ಹಾಗೂ ಆಡಳಿತ ಮಂಡಳಿಯ ವಿರುದ್ಧ ಮುಷ್ಕರವನ್ನು ಹೂಡಿ ಪ್ರತಿಭಟನೆಯನ್ನು ನಡೆಸಿದರು. ಕಾರ್ಮಿಕರಿಗೆ ಅನಾರೋಗ್ಯವಾದಲ್ಲಿ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲು ಯಾವದೇ ವಾಹನ ಸೌಲಭ್ಯ ಇಲ್ಲದೆ ತೊಂದರೆಯಾಗಿದೆಯೆಂದರು. ಈ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ಸಿ.ಐ.ಟಿ.ಯು ಸಂಘಟನೆಯ ಮುಖಂಡ ಮಾದೇವ್ ಮಾತನಾಡಿ ಮಸ್ಕಲ್ ಚೆಟ್ಟಿನಾಡ್ ಖಾಸಗಿ ಕಾಫಿ ತೋಟದ ಮಾಲೀಕರ ಹಾಗೂ ಆಡಳಿತ ಮಂಡಳಿಯವರು ಕೂಡಲೇ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಹಾಗೂ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಹೆಚ್.ಬಿ ರಮೇಶ್ ಹಾಜರಿದ್ದರು.