ಸೋಮವಾರಪೇಟೆ,ಡಿ.8: ತಾಲೂಕಿನ ಯಡವನಾಡು ಮೀಸಲು ಅರಣ್ಯದ ಮೂಲಕ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಹುಲಿಯೊಂದು ಪ್ರತ್ಯಕ್ಷವಾಗಿ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ.

ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಯಡವನಾಡು ಅರಣ್ಯದ ನಡುಭಾಗದಲ್ಲಿ ಹಾದು ಹೋಗಿರುವ ಸೋಮವಾರಪೇಟೆ-ಕುಶಾಲನಗರ ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಬಸವಣ್ಣ ದೇವಸ್ಥಾನದ ಬಳಿ ಬೃಹತ್ ಗಾತ್ರದ ಹುಲಿಯೊಂದು ಪ್ರತ್ಯಕ್ಷಗೊಂಡಿದ್ದು, ಕೆಲಕಾಲ ಆತಂಕ ಸೃಷ್ಟಿಸಿತ್ತು.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ ಮತ್ತು ಅವರ ಸ್ನೇಹಿತರಾದ ಹರೀಶ್, ಮೋಹನ್, ಹರ್ಷ ಅವರುಗಳು ಕಾರಿನಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಸೋಮವಾರಪೇಟೆಯಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಸಂದರ್ಭ ರಸ್ತೆಗೆ ಅಡ್ಡಲಾಗಿ ಹುಲಿ ದಾಟಿದೆ.

ಈ ವಿಷಯವನ್ನು ಅರಣ್ಯ ಇಲಾಖೆಗೆ ತಿಳಿಸಿದ ಹಿನ್ನೆಲೆ ಇಂದು ಬೆಳಗ್ಗೆ ಅರಣ್ಯ ಇಲಾಖಾ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕಳೆದೊಂದು ವಾರದಿಂದ ಈ ವ್ಯಾಪ್ತಿಯಲ್ಲಿ ಹುಲಿ ಸಂಚರಿಸುತ್ತಿರುವ ಬಗ್ಗೆ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.

ಅರಣ್ಯದ ಅಂಚಿನಲ್ಲಿಯೇ ಗಿರಿಜನರ ಹಾಡಿ, ಯಡವನಾಡು ಗ್ರಾಮವಿದ್ದು, ಜನವಸತಿ ಪ್ರದೇಶದಲ್ಲಿ ಓಡಾಡುತ್ತಿರುವ ಹುಲಿಯನ್ನು ಸೆರೆಹಿಡಿಯಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.