ಶನಿವಾರಸಂತೆ, ಡಿ. 8: ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಕುರಿತು ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶನಿವಾರಸಂತೆ ಸಮೀಪದ ತ್ಯಾಗರಾಜ ಕಾಲೋನಿಯ ನಿವಾಸಿ ಜಾಫರ್ 5 ವರ್ಷಗಳ ಹಿಂದೆ ಅರಕಲಗೂಡು ತಾಲೂಕಿನ ಕೊರಟಗೆರೆ ಗ್ರಾಮದ ಮಹಮ್ಮದ್ ರಫೀಕ್ ಅವರ ತಂಗಿ ಪರ್ವಿನ್ ಭಾನು (27) ಎಂಬಾಕೆಯನ್ನು ಮದುವೆಯಾಗಿದ್ದು, ಈಕೆ ತಾ.6ರಂದು ಗಂಡನ ಮನೆಯಲ್ಲಿ ಮೃತಪಟ್ಟಿದ್ದಾರೆ. ತಂಗಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮಹಮ್ಮದ್ ರಫೀಕ್ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೃತೆ ಪರ್ವಿನ್ ಭಾನುಗೆ 3 ವರ್ಷದ ಹೆಣ್ಣು ಮಗುವೊಂದಿದ್ದು, ಇದೀಗ 3 ತಿಂಗಳ ಗರ್ಭಿಣಿಯಾಗಿದ್ದರು. ಇವರ ಸಂಸಾರದಲ್ಲಿ ಆಗಿಂದಾಗ್ಗೆ ಸಣ್ಣಪುಟ್ಟ ಗಲಾಟೆಗಳು ನಡೆಯುತ್ತಿದ್ದು, ಪರ್ವಿನ್ ಭಾನು ಅವರ ಕುಟುಂಬದವರು ಬಂದು ಬಗೆಹರಿಸಿ ಹೋಗುತ್ತಿದ್ದರು. ತಾ.6ರಂದು ತ್ಯಾಗರಾಜ ಕಾಲೋನಿಯ ಸಂಬಂಧಿಕರೊಬ್ಬರು ಪರ್ವಿನ್ ಮೃತಪಟ್ಟಿರುವದಾಗಿ ದೂರವಾಣಿಯ ಮೂಲಕ ತಿಳಿಸಿರುವದಾಗಿ ಅವರು ದೂರು ನೀಡಿದ್ದಾರೆ. ಸಾವಿನ ಬಗ್ಗೆ ಅನುಮಾನವಿದ್ದು, ಈ ಬಗ್ಗೆ ತನಿಖೆ ಮಾಡಿ ಕ್ರಮಕೈಗೊಳ್ಳುವಂತೆ ಮಹಮ್ಮದ್ ರಫೀಕ್ ಠಾಣೆಗೆ ನೀಡಿದ ದೂರಿನ ಮೇರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ, ತಹಶೀಲ್ದಾರ್ ಮಹೇಶ್ ಭೇಟಿ ನೀಡಿ ಪರಿಶೀಲಿಸಿದರು.