ಮಡಿಕೇರಿ, ಡಿ. 7: ಮುಂಬರುವ ಮಡಿಕೇರಿ ನಗರಸಭಾ ಚುನಾವಣೆಯಲ್ಲಿ ಪಕ್ಷದ ಹೈಕಮಾಂಡ್ ತೀರ್ಮಾನದಂತೆ ಆಯ್ಕೆಗೊಳ್ಳುವ ಕಾಂಗ್ರೆಸ್ ಅಭ್ಯರ್ಥಿಗಳ ಗೆಲವಿಗೆ ಪಕ್ಷದ ಎಲ್ಲಾ ಹಿರಿಯ-ಕಿರಿಯ ನಾಯಕರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಲು ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಕಾಂಗ್ರೆಸ್ ನಗರಾಧ್ಯಕ್ಷ ಕೆ.ಯು. ಅಬ್ದುಲ್ ರಜಾಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಪಕ್ಷದ ಕಾರ್ಯಕರ್ತರು ಮಡಿಕೇರಿ ನಗರದಲ್ಲಿ ಕೈಗೊಳ್ಳಬೇಕಾಗಿರುವ ತ್ವರಿತ ಕಾಮಗಾರಿಗಳ ಬಗ್ಗೆ ಸಭೆಯ ಗಮನ ಸೆಳೆದರು. ಮಡಿಕೇರಿ ನಗರಸಭಾ ಸದಸ್ಯರು ಹಾಗೂ ನಾಮಕರಣಗೊಂಡ ಸದಸ್ಯರ ಸಲಹೆಗಳನ್ನು ಕ್ರೋಢೀಕರಿಸಿ ನಗರಸಭಾ ಅಧ್ಯಕ್ಷರು ಹೊಂದಿರುವ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ, ಒಗ್ಗಟ್ಟಿನಿಂದ ಕಾರ್ಯನಿರ್ವಹಿಸ ಬೇಕೆಂದು ಸೂಚನೆ ನೀಡಲಾಯಿತು.

ನಗರಸಭಾ ಚುನಾವಣೆಗೆ ಸ್ಪರ್ಧಿಸಲು ಬಯಸುವ ಕಾಂಗ್ರೆಸ್ ಆಕಾಂಕ್ಷಿಗಳು ಮುಂದಿನ ಒಂದು ವಾರದೊಳಗೆ ಸಂಪೂರ್ಣ ವಿವರಗಳೊಂದಿಗೆ ಅರ್ಜಿ ಸಲ್ಲಿಸಬೇಕು, ನಗರಸಭೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರ ಪಡೆಯಬೇಕಾದರೆ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ದೂರವಾಗಬೇಕು, ರಾಹುಲ್ ಗಾಂಧಿಯವರ ಶಕ್ತಿ ಸದಸ್ಯತ್ವ ನೋಂದಾವಣಿ ಕಾರ್ಯಕ್ರಮವನ್ನು ನಗರದ 23 ವಾರ್ಡ್‍ಗಳ 29 ಮತಗಟ್ಟೆಗಳಲ್ಲಿ ಮೊಬೈಲ್‍ಗಳ ಮೂಲಕ ಮತದಾರರ ಪಟ್ಟಿಯ ಕ್ರಮ ಸಂಖ್ಯೆಯನ್ನು ನೋಂದಾಯಿಸಿ ಪಕ್ಷಕ್ಕೆ ಹೆಚ್ಚಿನ ಕಾರ್ಯಕರ್ತರನ್ನು ಸೇರಿಸಬೇಕು ಸೇರಿದಂತೆ ವಿವಿಧ ನಿರ್ಣಯಗಳನ್ನು ಸಭೆ ತೆಗೆದುಕೊಂಡಿತು.

ಕೆಪಿಸಿಸಿಯ ಹಿರಿಯ ಸದಸ್ಯ ಟಿ.ಪಿ. ರಮೇಶ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಕೆ. ಮಂಜುನಾಥ್ ಕುಮಾರ್, ಟಿ.ಎಂ. ಅಯ್ಯಪ್ಪ, ಮಡಿಕೇರಿ ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಈ. ಮ್ಯಾಥ್ಯು, ಮೂಡಾ ಮಾಜಿ ಅಧ್ಯಕ್ಷರುಗಳಾದ ಚುಮ್ಮಿ ದೇವಯ್ಯ ಮತ್ತು ಸುರಯ್ಯ ಅಬ್ರಾರ್, ಎಸ್.ಐ.ಮುನೀರ್ ಅಹಮ್ಮದ್, ಅಲ್ಪಸಂಖ್ಯಾತರ ಘಟದ ಹಿರಿಯ ನಾಯಕರಾದ ಎಂ.ಎ. ಉಸ್ಮಾನ್, ರಾಜೀವ್ ಗಾಂಧಿ ಘಟಕದ ಅಧ್ಯಕ್ಷರಾದ ತೆನ್ನೀರ ಮೈನಾ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಫ್ಯಾನ್ಸಿ ಪಾರ್ವತಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸದಾ ಮುದ್ದಪ್ಪ, ಹಿಂದುಳಿದ ವರ್ಗಗಳ ನಗರ ಅಧ್ಯಕ್ಷ ಜೆ.ಸಿ. ಜಗದೀಶ್, ಅಲ್ಪಸಂಖ್ಯಾತರ ನಗರ ಅಧ್ಯಕ್ಷರಾದ ಮಾರ್ಷಲ್, ನಗರಸಭಾ ಸದಸ್ಯರುಗಳಾದ ಜುಲೈಕಾಬಿ, ತಜುಸುಂ, ಟಿ.ಹೆಚ್. ಉದಯ್‍ಕುಮಾರ್, ಗಿಲ್ಬರ್ಟ್ ಲೋಬೋ, ಹೆಚ್.ಎಸ್. ಯತೀಶ್ ಕುಮಾರ್, ಕೆ.ಎಂ. ವೆಂಕಟೇಶ್, ಮಾಜಿ ಪುರಸಭಾ ಅಧ್ಯಕ್ಷರಾದ ಕೆ.ಜಿ. ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರ್.ಪಿ. ಚಂದ್ರಶೇಖರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನೀರ ಮೈನಾ ವಂದಿಸಿದರು.