ಸೋಮವಾರಪೇಟೆ, ಡಿ.8: ಜಿಲ್ಲಾ ಕಸಾಪ, ಸೋಮವಾರಪೇಟೆ ತಾಲೂಕು ಮತ್ತು ಕೊಡ್ಲಿಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್, ಕಿರಿಕೊಡ್ಲಿ ಮಠದ ಎಸ್ಜಿಎಸ್ ವಿದ್ಯಾಪೀಠದ ಆಶ್ರಯದಲ್ಲಿ ಕಿರಿಕೊಡ್ಲಿ ಮಠದ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು ಪ್ರಬುದ್ಧತೆಯಿಂದ ತಮ್ಮ ವಿಚಾರ ಮಂಡಿಸಿದರು.
ಮಕ್ಕಳ ಚಲನಚಿತ್ರಗಳ ಮೌಲ್ಯಗಳು ವಿಷಯದ ಬಗ್ಗೆ ಸೋಮವಾರಪೇಟೆ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಎಂ.ಆರ್. ದರ್ಶನ್ ವಿಚಾರ ಮಂಡಿಸಿ, ಚಲನಚಿತ್ರಗಳು ಮಕ್ಕಳ ಭವಿಷ್ಯ, ಆಸಕ್ತಿಗೆ ಪೂರಕ ವಾಗಿರಬೇಕು. ಸಾಮಾಜಿಕವಾಗಿ ಜವಾಬ್ದಾರಿ ಅರಿತುಕೊಳ್ಳುವ ಮನೋ ಭಾವ ಮೂಡಿಸುವಂತಿರ ಬೇಕು ಎಂದರು.
ಅಂತರ್ಜಾಲ ಬಳಕೆ ವಿಷಯದ ಬಗ್ಗೆ ವಿಚಾರ ಮಂಡಿಸಿದ ಕೊಡ್ಲಿಪೇಟೆ ಶಾಲೆಯ ಟಿ.ಎಸ್. ಅಜ್ಮಿನಾ, ಸ್ಪರ್ಧಾತ್ಮಕ ಯುಗದಲ್ಲಿ ಅಂತರ್ಜಾಲ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ವ್ಯಾಪಾರ ವಹಿವಾಟುಗಳಿಗೂ ಇದು ವೇದಿಕೆ ಯಾಗಿದೆ. ಅಂತರ್ಜಾಲದ ದುರ್ಬಳಕೆ ತಡೆಯುವ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅಭಿಮತ ವ್ಯಕ್ತಪಡಿಸಿದರು.
ಶೈಕ್ಷಣಿಕ ಪ್ರವಾಸಗಳ ಔಚಿತ್ಯ ವಿಷಯದ ಬಗ್ಗೆ ಮಾತನಾಡಿದ ಕೊಡ್ಲಿಪೇಟೆ ಎಸ್ಎಸ್ ಪದವಿ ಪೂರ್ವ ಕಾಲೇಜಿನ ಶಮಿತ ಪಟೇಲ್, ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ, ಸಹಭಾಗಿತ್ವ, ತಾಳ್ಮೆ, ಆಸಕ್ತಿ, ಏಕಾಗ್ರತೆ, ಜ್ಞಾನ ವೃದ್ಧಿಸಿಕೊಳ್ಳಲು ಪ್ರವಾಸ ಸಹಕಾರಿ ಎಂದರು. ಪರಂಪರೆಯಿಂದ ನಾವು ಕಲಿಯಬೇಕಾದುದು ವಿಷಯವನ್ನು ಮಂಡಿಸಿದ ಕಿರಿಕೊಡ್ಲಿ ಎಸ್ಎಸ್ ಶಾಲೆಯ ಡಿ.ಕೆ. ಗಾಯನ, ಕನ್ನಡ ನಾಡಿನ ಪರಂಪರೆ ಉನ್ನತ ವಾದುದು. ಧಾರ್ಮಿಕ, ಸಾಹಿತ್ಯ, ಸಂಗೀತ, ಶೈವ, ಭಕ್ತಿ ಪಂಥಗಳಲ್ಲಿ ಮೇರುಸ್ಥಾನದಲ್ಲಿದೆ. ಕೋಟೆ ಕೊತ್ತಲು, ಐತಿಹಾಸಿಕ ಸ್ಥಳಗಳು ಇಂದಿಗೂ ಪರಂಪರೆಯ ಕೊಂಡಿಯಾಗಿ ಉಳಿದಿವೆ ಎಂದರು.
ಆಟೋಟಗಳು ಪಠ್ಯಕ್ಕೆ ಪೂರಕ ವಿಷಯದ ಬಗ್ಗೆ ವಿಚಾರ ಮಂಡಿಸಿದ ಆಲೂರು ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನವ್ಯ, ಶೈಕ್ಷಣಿಕ ಬೆಳವಣಿಗೆ ಜತೆಗೆ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಆಟೋಟಗಳು ಸಹಕಾರಿಯಾಗಿವೆ. ಸ್ಪರ್ಧೆಗಳಿಂದ ವಿದ್ಯಾರ್ಥಿಗಳಲ್ಲಿ ಸಾಧಿಸುವ ಛಲ, ದೈಹಿಕ ಕ್ಷಮತೆ ಹೆಚ್ಚುತ್ತದೆ ಎಂದರು.
ಮಕ್ಕಳಿಗೆ ಮನೋರಂಜನೆ ಹೇಗಿರಬೇಕು ವಿಷಯದ ಬಗ್ಗೆ ಯಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಎಂ.ಎಲ್. ದರ್ಶನ್ ವಿಷಯ ಮಂಡಿಸಿ, ಮಾನಸಿಕ ಒತ್ತಡ ಮುಕ್ತವಾಗಿ ಪಾಠ ಪ್ರವಚನದಲ್ಲಿ ಭಾಗವಹಿಸಲು ಮನೋರಂಜನೆ ಅಗತ್ಯ ಎಂದರು. ಚಿತ್ರಕಲೆಯಿಂದ ಆಗುವ ಉಪಯೋಗ ವಿಷಯದ ಬಗ್ಗೆ ಅರ್ಕನಹಳ್ಳಿ ಸಂತ ಅನ್ನಮ್ಮ ಶಾಲೆಯ ಶೋಯೆಬ್ ವಿಚಾರ ಮಂಡಿಸಿ, ಪ್ರಸ್ತುತ ದಿನಮಾನಸದಲ್ಲಿ ಚಿತ್ರಕಲೆ ಹೆಚ್ಚಿನ ಪ್ರಾಮುಖ್ಯತೆ ಪಡೆದಿದ್ದು, ಶ್ರದ್ಧೆಯಿಂದ ತೊಡಗಿಸಿಕೊಂಡರೆ ಸಾಧನೆಗೆ ವೇದಿಕೆಯಾಗಲಿದೆ ಎಂದರು.
ವಿಚಾರ ಮಂಡನೆ ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ಕೊಡ್ಲಿಪೇಟೆ ಸರ್ಕಾರಿ ಪ್ರೌಢಶಾಲೆಯ ಕೆ. ಧನ್ಯ ವಹಿಸಿದ್ದರು. ವೇದಿಕೆಯಲ್ಲಿ ಕಸಾಪ ಪದಾಧಿಕಾರಿ ನಾಗರಾಜ್ ಶೆಟ್ಟಿ, ಮುಜಮಿಲ್ ಅಖ್ತರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.