ಮಡಿಕೇರಿ, ಡಿ.7 : ಮಡಿಕೇರಿ ನಗರಸಭೆಗೆ ಒಳಪಡುವ ಮೂರು ಸರ್ಕಾರಿ ಶಾಲೆಗಳ ಶಿಕ್ಷಕರುಗಳಿಗೆ ವೇತನ ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿರುವ ದಲಿತ ಸಂಘರ್ಷ ಸಮಿತಿ, ವೇತನ ವಂಚಿತ ಶಿಕ್ಷಕರುಗಳಿಗೆ ಆರ್ಥಿಕ ನೆರವನ್ನು ನೀಡುವ ಉದ್ದೇಶದಿಂದ ತಾ.17 ರಂದು “ಗುರುದಕ್ಷಿಣೆಗಾಗಿ ನಡೆ” ಎನ್ನುವ ವಿನೂತನ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿ ರುವದಾಗಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್, ಸಮಾಜಮುಖಿ ಸಂಘಟನೆಗಳ ಸಹಕಾರದೊಂದಿಗೆ ನಗರದ ಗದ್ದಿಗೆಯಿಂದ ಪ್ರಮುಖ ರಸ್ತೆಗಳಲ್ಲಿ ಸಾಗಿ ನಗರಸಭಾ ಶಾಲೆಯಲ್ಲಿ ಮೆರವಣಿಗೆಯನ್ನು ಮುಕ್ತಾಯ ಗೊಳಿಸುವದಾಗಿ ತಿಳಿಸಿದರು.
ಮೆರವಣಿಗೆಯುದ್ದಕ್ಕೂ ಸಾರ್ವಜನಿಕರಿಂದ ಗುರುದಕ್ಷಿಣೆ ರೂಪದಲ್ಲಿ ಹಣವನ್ನು ಸಂಗ್ರಹಿಸಿ ವೇತನ ವಂಚಿತ ಶಿಕ್ಷಕರಿಗೆ ನೀಡಲಾಗುವದು ಎಂದರು.
ಮಡಿಕೇರಿ ನಗರಸಭೆ ವ್ಯಾಪ್ತಿಗೆ ಒಳಪಡುವ ಎವಿ ಶಾಲೆ, ಹಿಂದೂಸ್ತಾನಿ ಶಾಲೆ ಹಾಗೂ ಮೈಸೂರು ರಸ್ತೆಯಲ್ಲಿರುವ ಶಾಲೆ ನಗರಸಭಾ ಶಾಲೆಗಳಾಗಿವೆ. ಈ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳೇ ವ್ಯಾಸಂಗ ಮಾಡುತ್ತಿದ್ದಾರೆ. ಇಂದಿನ ಡೊನೇಷನ್ ಹಾವಳಿಯ ಶಿಕ್ಷಣ ವ್ಯವಸ್ಥೆಯ ನಡುವೆ ಬಡ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವದೇ ಕಷ್ಟವಾಗಿದೆ. ಈ ಕಾರಣದಿಂದ ಬಡ ವರ್ಗದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಮೂರು ನಗರಸಭಾ ಶಾಲೆಗಳನ್ನೇ ಅವಲಂಬಿಸಬೇಕಾಗಿದೆ. ಆದರೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ಶಿಕ್ಷಕರು ವೇತನದಿಂದ ವಂಚಿತರಾಗಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಶಿಕ್ಷಕರುಗಳು ಮುಂದೊಂದು ದಿನ ಹುದ್ದೆ ಖಾಯಂ ಆಗಬಹುದೆನ್ನುವ ನಿರೀಕ್ಷೆಯಲ್ಲೇ ಸೇವೆಯಲ್ಲಿ ತೊಡಗಿದ್ದಾರೆ.
ಆದರೆ ಈ ಮೂರೂ ಶಾಲೆಗಳು ನಗರಸಭೆಗೆ ಸೇರಿರುವದರಿಂದ ಗುತ್ತಿಗೆ ಆಧಾರದ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ವೇತನ ದೊರೆಯುತ್ತಿಲ್ಲ. ಗೌರವ ಧನದ ರೂಪದಲ್ಲಿ ವೇತನವನ್ನು ನೀಡಬೇಕಾಗಿದ್ದ ನಗರಸಭೆ ಕಳೆದ ಅನೇಕ ವರ್ಷಗಳಿಂದ ಈ ಶಿಕ್ಷಕರಿಗಾಗಿ ಯಾವದೇ ಅನುದಾನವನ್ನು ಮೀಸಲಿಡದೆ ವಂಚಿಸುತ್ತಲೇ ಬಂದಿದೆ ಎಂದರು.
ನಗರಸಭಾ ಸದಸ್ಯರಾದ ಕೆ.ಜಿ.ಪೀಟರ್ ಅವರು ಮಾತ್ರ ಕಳೆದ 7 ವರ್ಷಗಳಿಂದ ತಮ್ಮ ದುಡಿಮೆಯ ಸ್ವಂತ ಹಣವನ್ನು ಶಿಕ್ಷಕರಿಗೆ ಗೌರವ ಧನದ ರೂಪದಲ್ಲಿ ನೀಡುತ್ತಿದ್ದಾರೆ.
ಶಿಕ್ಷಣವೇ ದೇಶದ ಶಕ್ತಿ ಎಂದು ಘೋಷಣೆ ಮಾಡುವ ಆಡಳಿತ ವ್ಯವಸ್ಥೆಯೇ ವಿದ್ಯೆ ನೀಡುವ ಶಿಕ್ಷಕರನ್ನು ಕಡೆಗಣಿಸಿರುವದನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕವು “ಗುರು ದಕ್ಷಿಣೆಗಾಗಿ ನಡೆ” ಎನ್ನುವ ವಿನೂತನ ರೀತಿಯ ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಿದೆ ಎಂದರು.
ಸಾರ್ವಜನಿಕರು ನೀಡುವ ದಕ್ಷಿಣೆಯನ್ನು ಮಡಿಕೇರಿ ನಗರಸಭೆಗೆ ಸೇರಿದ ಮೂರೂ ಶಾಲೆಗಳ ಶಿಕ್ಷಕರುಗಳಿಗೆ ಗೌರವ ಧನದ ರೂಪದಲ್ಲಿ ನೀಡಲಾಗುವದು. ಶಿಕ್ಷಕರನ್ನು ಕಡೆಗಣಿಸಿರುವ ಮಡಿಕೇರಿ ನಗರಸಭೆಯ ನಿರ್ಲಕ್ಷ್ಯವನ್ನು ಸಾರ್ವಜನಿಕರೂ ಖಂಡಿಸುವ ಮೂಲಕ ಬಡ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿರುವ ಬಡ ಶಿಕ್ಷಕರ ನೆರವಿಗೆ ಕೈಜೋಡಿಸಬೇಕು ಮತ್ತು ಗುರು ದಕ್ಷಿಣೆ ನೀಡುವ ಮೂಲಕ ಶಿಕ್ಷಕರ ಆತ್ಮಸ್ಥೈರ್ಯವನ್ನು ಹೆಚ್ಚಿಸಬೇಕು ಎಂದು ದಿವಾಕರ್ ಕರೆ ನೀಡಿದರು.
ಸ್ವೆಟರ್ ವಿತರಣೆ: ಮಡಿಕೇರಿ ನಗರಸಭೆಯಲ್ಲಿ ಅನೇಕ ಹಿರಿಯ ಪೌರ ಕಾರ್ಮಿಕರು ಮಳೆ, ಚಳಿಯಲ್ಲೂ ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ಅಗತ್ಯವಿರುವ ಸ್ವೆಟರ್ ವಿತರಿಸುವ ಬಗ್ಗೆಯೂ ದಲಿತ ಸಂಘರ್ಷ ಸಮಿತಿ ಚಿಂತನೆ ನಡೆಸಿದ್ದು, ಸಾಧ್ಯವಾದಲ್ಲಿ ಡಿ.17ರಂದೇ ವಿತರಿಸಲಾಗುವದು ಎಂದು ತಿಳಿಸಿದರು.
ತಾಲ್ಲೂಕು ಸಂಚಾಲಕ ಎ.ಪಿ.ದೀಪಕ್, ಪ್ರಮುಖರಾದ ಹೆಚ್.ಕೆ.ಗಣೇಶ, ಸಿದ್ದೇಶ್ವರ ಹಾಗೂ ವಸಂತ ಉಪಸ್ಥಿತರಿದ್ದರು.