ಮಡಿಕೇರಿ, ಡಿ. 6: ಮನರಂಜನೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಸಂತ್ರಸ್ತರ ಪರಿಹಾರ ನಿಧಿಯನ್ನು ವಿತರಿಸಿದ ವಿಶೇಷ ಕಾರ್ಯಕ್ರಮವೊಂದು ಗುರುವಾರ ವೀರಾಜಪೇಟೆ ಕೊಡವ ಸಮಾಜದಲ್ಲಿ ನಡೆಯಿತು. ‘ಪೂಮಾಲೆ’ ಪತ್ರಿಕೆ, ಕೊಡವ ತಕ್ಕ್ ಪರಿಷತ್, ಕೊಡವ ಪೊಮ್ಮಕ್ಕಡ ಒಕ್ಕೂಟದ ಸಹಯೋಗದಲ್ಲಿ ಏರ್ಪಡಿಸಿದ್ದ ‘ನಿಂಗಕ್ ನಂಗ ಉಂಡ್’ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಸೂರ್ಲಬ್ಬಿ ನಾಡಿನ ಆಯ್ದ 34 ಸಂತ್ರಸ್ತರಿಗೆ ಒಟ್ಟು ರೂ. 3 ಲಕ್ಷವನ್ನು ವಿತರಿಸಲಾಯಿತು.
ಪೂಮಾಲೆ ಪತ್ರಿಕೆ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಉದ್ಘಾಟಸಿದರು.
ಮುಖ್ಯ ಭಾಷಣಕಾರರಾಗಿ ಸ್ವತಃ ಏಳುನಾಡಿನವರಾದ, ಕೊಡಗು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಹಾಗೂ ಮಕ್ಕಂದೂರು ಕೊಡವ ಸಮಾಜದ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಆಗಮಿಸಿದ್ದರು. ಸಂತ್ರಸ್ತರ ನೆರವಿಗೆ ಜಿಲ್ಲೆ, ರಾಜ್ಯ, ಹೊರ ರಾಜ್ಯದಾದ್ಯಂತ ಯಾವದೇ ಬೇಧ-ಭಾವ ಇಲ್ಲದೆ ನೆರವಿನ ಮಹಾಪೂರ ಹರಿದುಬಂದಿರುತ್ತದೆ. ಆದರೆ, ಹಲವು ಸ್ಥಿತಿವಂತರು ಇದರ ಭಾಗಿದಾರರಾಗಿ ವಂಚಿಸಿದ್ದು ಬೇಸರದ ಸಂಗತಿ. ಹಲವು ನಿಜವಾದ ಸಂತ್ರಸ್ತರಿಗೆ ಅಂದಿನ ದಿನಗಳಲ್ಲಿ ಸಿಗಬೇಕಾಗಿದ್ದ ಯಾವದೇ ಸಾಮಗ್ರಿ ಸಿಕ್ಕಿರುವದಿಲ್ಲ. ಪೂಮಾಲೆ ಪತ್ರಿಕೆ ವತಿಯಿಂದ ‘ನಿಂಗಕ್ ನಂಗ ಉಂಡ್’ ಎಂಬ ಅರ್ಥಪೂರ್ಣ ಕಾರ್ಯಕ್ರಮದ ಮೂಲಕ ಸಹಾಯ ಹಸ್ತ ಚಾಚಿರುವದು ಅರ್ಥಪೂರ್ಣ ಎಂದರು.
ಸರ್ಕಾರದ ನೆರವಿಗೆ ಇನ್ನೂ ಹಲವು ತಿಂಗಳುಗಳೆ ಆಗಬಹುದು. ಆ ವೇಳೆಗೆ ಮತ್ತೊಂದು ಮಳೆಗಾಲವನ್ನು ನಾವುಗಳು ಎದುರಿಸಬೇಕಾಗಿದೆ. ಈ ಸಂದರ್ಭದಲ್ಲಿ ಸೂರು ಕಳೆದುಕೊಂಡಿರುವವರ ಪರಿಸ್ಥಿತಿ ಚಿಂತಾಜನಕವಾಗಬಹುದು. ಈ ಉದ್ದೇಶದಿಂದ ನಾವುಗಳು ಸರ್ಕಾರದ ವಿರುದ್ಧ ಹಮ್ಮಿಕೊಂಡಿರುವ ಹೋರಾಟಕ್ಕೆ ನಾಡಿನಾದ್ಯಂತ ಪ್ರತಿಯೊಬ್ಬರ ಬೆಂಬಲದ ಅಗತ್ಯವಿದೆ. ನಮ್ಮ ಶಾಶ್ವತ ನೆಲೆ ಹಾಗೂ ಜೀವನಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಶಕ್ತಿ ದಿನಪತ್ರಿಕೆಯ ಸಲಹ ಸಂಪಾದಕ, ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ತಮ್ಮ ಮುಕ್ತವಾದ ಮಾತುಗಳಲ್ಲಿ ಪೂಮಾಲೆ ಪತ್ರಿಕೆಯ ಮಾನವೀಯತೆಯ ಕಾರ್ಯವನ್ನು ಶ್ಲಾಘಿಸಿದರು. ಕೊಡಗಿನಲ್ಲಿ ನಾವೆಲ್ಲರೂ ಒಂದೇ ಕುಟುಂಬದವರಾಗಿ ಜೀವನ ನಡೆಸಿದಲ್ಲಿ ಸುಭೀಕ್ಷೆ ಹಾಗೂ ಸಂತೃಪ್ತಿ ಮನೆ ಮಾಡಲಿದೆ. ಜಲಪ್ರಳಯದ ಸಂದರ್ಭದಲ್ಲಿ ಒಂದೇ ಸಂಸಾರದಲ್ಲಿ ಹೆತ್ತ ತಾಯಿಯನ್ನು ರಕ್ಷಿಸಲು ಸಾಧ್ಯವಾಗಿಲ್ಲದ ಪ್ರಸಂಗವನ್ನು ನಾವು ಕಂಡಿದ್ದೇವೆ. ನಮ್ಮ ತಲೆಗೆ ನಮ್ಮ ಕೈಯಿಂದಲೇ ರಕ್ಷಣೆ ಸಾಧ್ಯ. ಜಾತಿ, ಮತವನ್ನು ಲೆಕ್ಕಿಸದೆ ಸಹಬಾಳ್ವೆ ನಡೆಸುವದು ಅಗತ್ಯವೆಂದರು.
ಮನೆಯಪಂಡ ಕಾಂತಿ ಸತೀಶ್ ತಮ್ಮ ಮಾತಿನಲ್ಲಿ, ತಮ್ಮದೇ ಆದ ಯಾವದೇ ವಸ್ತುಗಳನ್ನು ಕಳೆದುಕೊಂಡಾಗ ಸ್ವತಃ ಯಾವ ರೀತಿಯ ದುಃಖ ಉಮ್ಮಳಿಸುತ್ತದೆ ಹಾಗೂ ಅವುಗಳನ್ನು ಮರೆಯಲು ನಾವು ಎಷ್ಟು ಒದ್ದಾಡಬೇಕಾಗುತ್ತದೆ ಎಂಬವದನ್ನು ಅನುಭವಗಳೊಂದಿಗೆ ಹಂಚಿಕೊಂಡು ಸಂತ್ರಸ್ತರಿಗೆ ಧೈರ್ಯದ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಹೇಶ್ ನಾಚಯ್ಯ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಏಳುನಾಡು ನಮ್ಮ ಸಂಸ್ಕøತಿಯ ನೆಲೆವೀಡು. ಇಲ್ಲಿನ ಜನತೆ ಯಾವದೇ ರೀತಿಯ ಘಟನೆಗಳಿಗೆ ಹೆದರದೆ ಮುಂದಿನ ಜೀವನವನ್ನು ಧೈರ್ಯದಿಂದ ನಡೆಸುವಂತಾಗಬೇಕು. ಯಾರೇ ಆಗಲಿ ಆಸ್ತಿ-ಪಾಸ್ತಿಯನ್ನು ಮಾರುವ ಮನಸ್ಸು ಮಾಡದೆ ಪುನಃಶ್ಚೇತನಗೊಳ್ಳಬೇಕೆಂದು ಜಪಾನ್ ಹಾಗೂ ಇಸ್ರೇಲ್ ರಾಷ್ಟ್ರಗಳ ಏಳಿಗೆಯನ್ನು ಉದಾಹಣೆಯೊಂದಿಗೆ ವಿವರಿಸಿದರು.
ಕಾರ್ಯಕ್ರಮದ ಮೊದಲಿಗೆ ಪಾಡೆಯಂಡ ಸತೀಶ್ ಕಾರ್ಯಪ್ಪರಿಂದ ಪ್ರಾರ್ಥನೆ, ಕೊಡವ ಪೊಮ್ಮಕ್ಕಡ ಒಕ್ಕೂಟದ ಸದಸ್ಯೆ ಅಣ್ಣಾರ್‍ಕಂಡ ಪೂಜ ತಂಡದಿಂದ ಸ್ವಾಗತ ನೃತ್ಯ, ಆರ್ಜಿ ಗ್ರಾಮಸ್ಥರಿಂದ ತಾಲಿಪಾಟ್, ಮುತ್ತಕ್ಕ ಗ್ರೂಪ್ ಸದಸ್ಯರಿಂದ ನೃತ್ಯ, ಬೊವ್ವೇರಿಯಂಡ ಆಶಾ, ತಾತಂಡ ಪ್ರಭ ಹಾಗೂ ನಯನರಿಂದ ರೂಪಕ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.
ಅಜ್ಜಿನಿಕಂಡ ಪ್ರಮೀಳ ನಾಚಯ್ಯ, ಬಯವಂಡ ಇಂದಿರಾ ಬೆಳ್ಯಪ್ಪ ನಿರೂಪಿಸಿದ ಕಾರ್ಯಕ್ರಮವನ್ನು ಅಮ್ಮಣಿಚಂಡ ಗಂಗಮ್ಮ ಬೆಳ್ಯಪ್ಪ ವಂದಿಸಿದರು. ಕಳ್ಳಂಗಡ ಬೋಪಯ್ಯ, ಕಾಳಕ್ಕ ಗ್ರೂಪ್‍ನ ಅಧ್ಯಕ್ಷೆ ಮೂಳೆರ ಆಶಾ ಉತ್ತಪ್ಪ ವೇದಿಕೆಯಲ್ಲಿ ಇದ್ದರು. ಸರ್ವರಿಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಪೊಮ್ಮಕ್ಕಡ ಒಕ್ಕೂಟದಿಂದ ಆಯೋಜಿಸಲಾಗಿತ್ತು.