ಕುಶಾಲನಗರ, ಡಿ. 6: ಕೊಡಗು ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪ ಘಟನೆಗೆ ರಾಜ್ಯದ ಸಮ್ಮಿಶ್ರ ಸರಕಾರ ಪೂರಕವಾಗಿ ಸ್ಪಂದಿಸಿದ್ದು ಪರಿಹಾರ ಕಾರ್ಯ ಪ್ರಗತಿಯಲಿ ದ್ದರೂ ಬಿಜೆಪಿ ವಿನಾಕಾರಣ ಆರೋಪ ಮಾಡುತ್ತಿರುವದು ಸರಿಯಲ್ಲ ಎಂದು ನೈರುತ್ಯ ಶಿಕ್ಷಕರ ಸಂಘದ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ ಹೇಳಿದರು.

ಸ್ಥಳೀಯ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪದಲ್ಲಿ ನಲುಗಿದವರಿಗೆ ಸರಕಾರ ಅಗತ್ಯ ನೆರವು ಕಲ್ಪಿಸುತ್ತಿದೆ. ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿರುವ ಮುಖ್ಯಮಂತ್ರಿಗಳು ಅಧಿಕಾರಿಗಳ ಸಭೆ ನಡೆಸಿ ಆಗಬೇಕಾದ ಪರಿಹಾರ ಕಾರ್ಯಕ್ಕೆ ಎಲ್ಲಾ ರೀತಿಯ ನೆರವು ನೀಡಿದ್ದಾರೆ. ಮನೆ ಕಳೆದು ಕೊಂಡವರಿಗೆ ಮನೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದರೂ ಜಿಲ್ಲೆಯ ಬಿಜೆಪಿ ನಾಯಕರು, ಶಾಸಕರುಗಳು ವಿನಾಕಾರಣ ಮುಖ್ಯಮಂತ್ರಿಗಳ ಮೇಲೆ ಗೂಬೆ ಕೂರಿಸುವ ಯತ್ನದಲ್ಲಿದ್ದಾರೆ ಎಂದರು. ಸಂತ್ರಸ್ತರಿಗಾಗಿ ಹರಿದು ಬಂದ ಪರಿಹಾರ ಮೊತ್ತ ಅರ್ಹ ಫಲಾನುಭವಿಗಳಿಗೆ ಸೇರಲಿದೆ. ಇದರಲ್ಲಿ ಎಳ್ಳಷ್ಟು ದುರುಪಯೋಗ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪ್ರತಿಯೊಬ್ಬರೂ ಕೂಡ ನೊಂದವರಿಗೆ ಧ್ವನಿಯಾಗಿ ಕಾರ್ಯನಿರ್ವಹಿಸಬೇಕಿದೆ ಹೊರತು ಇಂತಹ ಸಂದರ್ಭದಲ್ಲಿ ರಾಜಕೀಯ ಸಲ್ಲ ಎಂದರು.

ಕುಮಾರಸ್ವಾಮಿ ಘೋಷಿಸಿದಂತೆ ರಾಜ್ಯ ರೈತ ಸಾಲ ಮನ್ನಾ ಸಂಪೂರ್ಣವಾಗಿ ಆಗಲಿದೆ. ರೈತ ಫಲಾನುಭವಿಗಳನ್ನು ಗುರುತಿಸ ಲಾಗಿದ್ದು, ಸಹಕಾರಿ ಕ್ಷೇತ್ರಗಳ ರೈತರ ಸಾಲ ಹೊರತುಪಡಿಸಿ ರಾಷ್ಟ್ರೀಕೃತ ಬ್ಯಾಂಕುಗಳ ರೈತರ ಸಾಲ ಮನ್ನಾ ಪ್ರಕ್ರಿಯೆ ತುಸು ವಿಳಂಭ ಉಂಟಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳ ನೀತಿಗಳು ತುಸು ಜಟಿಲವಾಗಿರುವ ಕಾರಣ ಅರ್ಹ ಫಲಾನುಭವಿಗಳ ಪಟ್ಟಿ ಸಿದ್ದಪಡಿಸಲು ವಿಳಂಭವಾಗುತ್ತಿದೆ. ರಾಜ್ಯ ಸರಕಾರಕ್ಕೆ ಅಗತ್ಯ ಮಾಹಿತಿ ನೀಡಿ ಸಹಕರಿಸುವಂತೆ ಕೇಂದ್ರದಲ್ಲಿರುವ ಬ್ಯಾಂಕಿಂಗ್ ಅಧಿಕಾರಿಗಳಿಗೆ ಬಿಜೆಪಿ ನಾಯಕರು ಮನವಿ ಮಾಡುವಂತೆ ಅವರು ಆಗ್ರಹಿಸಿದರು. ಶಿಕ್ಷಕರ ಸಮಸ್ಯೆಗಳಿಗೆ, ಬೇಡಿಕೆಗಳಿಗೆ ಸರಕಾರ ಸೂಕ್ತವಾಗಿ ಸ್ಪಂದಿಸಲಿದ್ದು, ವಿಶೇಷ ಭತ್ಯೆ, ಗಿರಿ ಭತ್ಯೆ, ಕಾಲ್ಪನಿಕ ವೇತನ ಸಂಬಂಧ ಉಂಟಾಗಿರುವ ಗೊಂದಲ ನಿವಾರಣೆಗೆ ಸರಕಾರ ಬದ್ದವಾಗಿದೆ. ಈ ಬಾರಿ ಶಿಕ್ಷಕರು ತಮ್ಮ ಬೇಡಿಕೆಗಳ ಈಡೇರಿಕೆಗೆ ಮೌಲ್ಯಮಾಪನ ಬಹಿಷ್ಕರಿಸದ ರೀತಿಯಲ್ಲಿ ಸಮಸ್ಯೆ ಬಗೆಹರಿಸಲು ಸರಕಾರ ಬದ್ದವಾಗಿದೆ ಎಂದರು.