ಗೋಣಿಕೊಪ್ಪ ವರದಿ, ಡಿ. 6 : ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಸಭಾಂಗಣದಲ್ಲಿ ತಾಲೂಕು ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಪೊನ್ನಂಪೇಟೆ ಹೋಬಳಿ ಕೃಷಿ ಅಭಿಯಾನ ಮತ್ತು ವಿಶ್ವ ಮಣ್ಣು ಆರೋಗ್ಯ ದಿನಾಚರಣೆಯ ರೈತರೊಂದಿಗೆ ಸಂವಾದ ನಡೆಯಿತು. ಆಕಾಶವಾಣಿ ಕೃಷಿರಂಗ ಕಾರ್ಯಕ್ರಮ ನಿರ್ವಾಹಕ ಡಾ. ವಿಜಯ್ ಅಂಗಡಿ ಮಾತನಾಡಿ, ಮನೆಯಲ್ಲಿ ಹೂಕುಂಡದ ಮೂಲಕವೂ ತರಕಾರಿ ಬೆಳೆಯಲು ಅವಕಾಶವಿದೆ. ಗೊಬ್ಬರಕ್ಕಾಗಿ ದುಂದುವೆಚ್ಚ ಮಾಡುವದಕಿಂತ ಸ್ಥಳೀಯವಾಗಿ ದೊರೆಯುವ ಕಸಕಡ್ಡಿ, ಸಗಣಿ ಇಂತಹವುಗಳನ್ನು ಗೊಬ್ಬರವಾಗಿ ಬಳಕೆ ಮಾಡಿಕೊಳ್ಳಬಹುದು. ಇದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದರು.

ಯುವ ಸಮೂಹ ಕೆಲಸಕ್ಕಾಗಿ ವಲಸೆ ಹೋಗುವದನ್ನು ನಿಲ್ಲಿಸಿ, ಸ್ಥಳೀಯವಾಗಿ ಅವರದ್ದೇ ಆದ ವೈಯಕ್ತಿಕ ವರ್ಚಸ್ಸು ಬೆಳೆಸಲು ಮುಂದಾಗಬಹುದು. ಕೃಷಿಯಲ್ಲಿಯೇ ಸಾಕಷ್ಟು ಅವಕಾಶವಿದ್ದು, ಇಲ್ಲಿ ಉಳಿತಾಯ ಹೆಚ್ಚಾಗಲಿದೆ. ಈ ಬಗ್ಗೆ ಯುವ ಸಮೂಹ ಚಿಂತನೆ ನಡೆಸಬೇಕು. ತಮ್ಮದೇ ಆದ ಸ್ವಉದ್ಯೋಗ ಸೃಷ್ಠಿಸಬೇಕು ಎಂದರು.

ಚೆಟ್ಟಳ್ಳಿ ಕಾಫಿ ಮಂಡಳಿ ಮಣ್ಣು ತಜ್ಞ ಡಾ. ಶಿವಪ್ರಸಾದ್ ಮಾತನಾಡಿ, ಕಾಫಿ ಕೃಷಿಯಲ್ಲಿ ಗೊಬ್ಬರ ಸಮತೋಲನ ಕಾಪಾಡಿಕೊಳ್ಳಲು ಕೃಷಿಕರು ಯೋಜನೆ ರೂಪಿಸಿಕೊಳ್ಳಬೇಕು. ವರ್ಷಕ್ಕೆ 2 ಬಾರಿ ಗೊಬ್ಬರದ ಪ್ರಮಾಣವನ್ನು 4-5 ಬಾರಿ ನೀಡುವದರಿಂದ ಪೋಶಕಾಂಶ ದೊರೆತಂತಾಗುತ್ತದೆ. ಮುಂಗಾರು, ಹಿಂಗಾರು, ಆಗಸ್ಟ್ ತಿಂಗಳಲ್ಲಿ ಗೊಬ್ಬರ ನೀಡುವದನ್ನು ಕರಗತ ಮಾಡಿಕೊಳ್ಳಬೇಕಿದೆ ಎಂದರು.

ಡಾ. ಪ್ರಭಾಕರ್ ತೋಟಗಾರಿಕೆ ಮತ್ತು ಮಣ್ಣಿನ ಸಮತೋಲದ ಬಗ್ಗೆ ಮಾತನಾಡಿದರು. ಡಾ. ವೀರೇಂದ್ರಕುಮಾರ್ ರೋಗದ ನಿರ್ವಹಣೆ ಬಗ್ಗೆ ಸಲಹೆ ನೀಡಿದರು. ಈ ಸಂದರ್ಭ ಕೃಷಿ ತಾಲೂಕು ಅಧಿಕಾರಿ ರೀನಾ, ಕೆವಿಕೆ ಮುಖ್ಯಸ್ಥ ಸಾಜುಜಾರ್ಜ್, ಪ್ರಗತಿಪರ ಕೃಷಿಕ ಗಣೇಶ್ ತಿಮ್ಮಯ್ಯ ಮಾತನಾಡಿದರು.