ಕುಶಾಲನಗರ, ಡಿ. 6: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮೂಲಕ ಕುಶಾಲನಗರ ಮತ್ತು ಮುಳ್ಳುಸೋಗೆ ಪಂಚಾಯಿತಿ ವ್ಯಾಪ್ತಿಯ ಶೇ. 100 ರಷ್ಟು ಮನೆಗಳಿಗೆ ನಿರಂತರ ಕುಡಿವ ನೀರು ಸರಬರಾಜು ಮಾಡಲು ರಾಜ್ಯ ಸರಕಾರ 2018-19 ರ ಬಜೆಟ್‍ನಲ್ಲಿ ಅನುದಾನ ಕಲ್ಪಿಸಿದೆ. ಕಾವೇರಿ ನದಿಯಿಂದ ನೀರನ್ನು ಮೇಲೆತ್ತಿ ಸರಬರಾಜು ಮಾಡುವ ಪ್ರಕ್ರಿಯೆಗೆ ಒಟ್ಟು 12 ಕೋಟಿ 53 ಲಕ್ಷ ರೂ. ಗಳ ಯೋಜನೆಗೆ ರಾಜ್ಯ ಸರಕಾರ ಹಸಿರು ನಿಶಾನೆ ನೀಡುವದರೊಂದಿಗೆ ನಗರಾಭಿವೃದ್ಧಿ ಇಲಾಖೆಯಿಂದ ಕಡತ ಹೊರಬಿದ್ದ ಬೆನ್ನಲ್ಲೇ ಯೋಜನೆ ಜಾರಿಗೊಳ್ಳಲಿದೆ.

ರಾಜ್ಯದ ಕೇವಲ 10 ನಗರಗಳಿಗೆ ಮಾತ್ರ ಈ ಯೋಜನೆ ಬಿಡುಗಡೆಗೊಂಡಿದ್ದು ಕೊಡಗು ಜಿಲ್ಲೆಯ ಕುಶಾಲನಗರ, ಕೆಜಿಎಫ್‍ನ ಬೇತಮಂಗಲ, ಹುಬ್ಬಳ್ಳಿ, ಧಾರವಾಡ, ಮಂಡ್ಯ, ರಾಮನಗರ, ಚನ್ನಪಟ್ಟಣ, ಬೆಳಗಾಂ, ಬಿಜಾಪುರ, ಕಲಬುರ್ಗಿ, ಶಿವಮೊಗ್ಗ ಪಟ್ಟಣಗಳಿಗೆ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ಕುಶಾಲನಗರದಲ್ಲಿ ಪ್ರಸಕ್ತ 15,326 ಮತ್ತು ಮುಳ್ಳುಸೋಗೆ, ಗುಮ್ಮನಕೊಲ್ಲಿ ವ್ಯಾಪ್ತಿಯ 9,981 ಜನಸಂಖ್ಯೆ ಸೇರಿದಂತೆ ಅಂದಾಜು 30 ಸಾವಿರ ನಾಗರಿಕರಿಗೆ ಈ ವ್ಯವಸ್ಥೆ ಮೂಲಕ ನಿರಂತರ ಕುಡಿಯುವ ನೀರು ಸರಬರಾಜು ಕಲ್ಪಿಸುವ ಯೋಜನೆ ಇದಾಗಿದೆ. ಯೋಜನೆಗೆ ಬೇಕಾದ ಪಂಪ್‍ಸೆಟ್‍ಗಳು, ಪೈಪ್‍ಗಳು, ಟ್ಯಾಂಕ್‍ಗಳು ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಈ ಯೋಜನೆ ಸಧ್ಯದಲ್ಲೇ ಪ್ರಾರಂಭಗೊಳ್ಳುವ ನಿಟ್ಟಿನಲ್ಲಿ ಮಂಡಳಿಯ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ.

2006 ರಲ್ಲಿ ನಿರ್ಮಾಣಗೊಂಡ ಯೋಜನೆ ಮೂಲಕ ಇದೀಗ ಕುಶಾಲನಗರ ಮತ್ತು ಮುಳ್ಳುಸೋಗೆ ವ್ಯಾಪ್ತಿಯ ಜನರಿಗೆ ಕುಡಿವ ನೀರು 3 ದಿನಗಳಿಗೊಮ್ಮೆ ಪೂರೈಸ ಲಾಗುತ್ತಿದ್ದು ಈ ಯೋಜನೆ ಅನುಷ್ಠಾನಗೊಂಡಲ್ಲಿ ಈ ವ್ಯಾಪ್ತಿಯ ಪ್ರಮುಖ ಸಮಸ್ಯೆಗೆ ಪರಿಹಾರ ಒದಗಿದಂತಾಗುತ್ತದೆ.

ಈ ನಡುವೆ ಕುಶಾಲನಗರದ ಆರ್‍ಕೆ, ಆರ್‍ಸಿ ಬಡಾವಣೆಗಳ 200 ಸಂಪರ್ಕಗಳು, ಗುಂಡುರಾವ್ ಬಡಾವಣೆಯ 80, ಚಿಕ್ಕಣ್ಣ ಬಡಾವಣೆಯ 100, ಸಿದ್ದಯ್ಯ ಪುರಾಣಿಕ್ ಮತ್ತು ಹೌಸಿಂಗ್ ಬೋರ್ಡ್ ಕಾಲನಿಯ 150 ಹಾಗೂ ಓಂಕಾರ್ ಬಡಾವಣೆಯ 80 ಸಂಪರ್ಕಗಳು ಸೇರಿದಂತೆ 610 ಮನೆಗಳಿಗೆ ಪ್ರಸಕ್ತ ಕೊಳವೆ ಬಾವಿಯ ನೀರನ್ನು ಬಳಸುವಂತಾಗಿದೆ. ಈ ಯೋಜನೆ ಮೂಲಕ ಬಡಾವಣೆಗಳಿಗೆ ನಿರಂತರ ಕಾವೇರಿ ನೀರು ಪೂರೈಕೆ ಕೂಡ ನಡೆಯಲಿದೆ. ಕುಶಾಲನಗರ ಮತ್ತು ಮುಳ್ಳುಸೋಗೆ ವ್ಯಾಪ್ತಿಗೆ ಇದೀಗ ದಿನವೊಂದಕ್ಕೆ 2.5 ರಿಂದ 2.8 ಮಿಲಿಯನ್ ಲೀಟರ್ ನೀರು ಪೂರೈಸಲಾಗುತ್ತಿದ್ದು ಈ ನೂತನ ಯೋಜನೆ ಲೋಕಾರ್ಪಣೆಗೊಂಡಲ್ಲಿ ದಿನನಿತ್ಯ 8 ಮಿಲಿಯನ್ ನೀರು ಒದಗಿಸಲು ಸಾಧ್ಯವಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಸಹಾಯಕ ಅಭಿಯಂತರ ಆನಂದ್ ‘ಶಕ್ತಿ’ಗೆ ತಿಳಿಸಿದ್ದಾರೆ.

ಹಾರಂಗಿ ಜಲಾಶಯದಿಂದ ಕುಶಾಲನಗರಕ್ಕೆ ಕುಡಿವ ನೀರು ಯೋಜನೆ ರೂಪಿಸಲು 81 ಕೋಟಿ ರೂ.ಗಳ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದ್ದು ಅಧಿಕ ವೆಚ್ಚವಾದ ಹಿನ್ನೆಲೆಯಲ್ಲಿ ಕಾವೇರಿ ನದಿಯಿಂದ ನೀರು ಪೂರೈಕೆ ಮಾಡಬಹುದಾದ ಈ ಯೋಜನೆಗೆ ಸರಕಾರದ ಬಜೆಟ್‍ನಲ್ಲಿ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ.

ಕುಶಾಲನಗರ ಪಟ್ಟಣ ಮತ್ತು ಮುಳ್ಳುಸೋಗೆ ವ್ಯಾಪ್ತಿ ಸೇರಿದಂತೆ ಈಗಾಗಲೆ 3500 ಕ್ಕೂ ಅಧಿಕ ನಲ್ಲಿ ಸಂಪರ್ಕಗಳು ಚಾಲ್ತಿಯಲ್ಲಿದ್ದು ಇದಕ್ಕೆ 600 ಕ್ಕೂ ಅಧಿಕ ಸಂಪರ್ಕ ಸೇರ್ಪಡೆಗೊಳ್ಳಲಿದೆ. ಇದುವರೆಗೆ ಪಟ್ಟಣದಲ್ಲಿ ಗ್ರಾಹಕರು ಮಂಡಳಿಗೆ ಒಟ್ಟು 40 ಲಕ್ಷ ರುಗಳ ಬಿಲ್ ಪಾವತಿಸಲು ಬಾಕಿಯಿದ್ದು ಅದರಲ್ಲಿ ಪ.ಪಂ.ಯ ಸಾರ್ವಜನಿಕ ನಲ್ಲಿಯ 15 ಲಕ್ಷ ರೂ. ಗಳು ಕೂಡ ಒಳಗೊಂಡಿದೆ ಎಂದು ಆನಂದ್ ಮಾಹಿತಿ ನೀಡಿದ್ದಾರೆ.

ಕುಶಾಲನಗರಕ್ಕೆ ಸರಕಾರದಿಂದ ನೀಡಿರುವ 24x7 ಯೋಜನೆ ಇನ್ನೂ ನೆನೆಗುದಿಗೆ ಬಿದ್ದಿದ್ದು ಪ್ರಸಕ್ತ ಸರಕಾರದಿಂದ ಕಲ್ಪಿಸಿರುವ ಈ ನೂತನ ಯೋಜನೆ ನಿಜಕ್ಕೂ ಸ್ವಾಗತಾರ್ಹ ಎಂದಿದ್ದು ತಕ್ಷಣ ಅನುಷ್ಠಾನಗೊಳಿಸಲು ಸ್ಥಳೀಯ ಪಂಚಾಯಿತಿ ಸೇರಿದಂತೆ ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ತರಬೇಕಾಗಿದೆ ಎಂದು ಕುಶಾಲನಗರ ಬಿಜೆಪಿ ನಗರಾಧ್ಯಕ್ಷ ಕೆ.ಜಿ. ಮನು ‘ಶಕ್ತಿ’ ಮೂಲಕ ಆಗ್ರಹಿಸಿದ್ದಾರೆ. ಪಟ್ಟಣದಲ್ಲಿ ಕೆಲವು ಯೋಜನೆಗಳಂತೆ ಈ ಯೋಜನೆ ಕೂಡ ಪಂಚವಾರ್ಷಿಕ ಯೋಜನೆ ಯಾಗದಂತೆ ಎಚ್ಚರವಹಿಸುವದು ಒಳಿತು ಎಂದಿದ್ದಾರೆ.

ನೂತನ ಯೋಜನೆಯ ಶೀಘ್ರ ಅನುಷ್ಠಾನದ ನಿಟ್ಟಿನಲ್ಲಿ ಶಾಸಕರ ಮೂಲಕ ಸರಕಾರದ ಅರ್ಜಿ ಸಮಿತಿಗೆ ಮನವಿ ಸಲ್ಲಿಸಲಾಗುವದು ಎಂದಿದ್ದಾರೆ.

- ಚಂದ್ರಮೋಹನ್