ಮಡಿಕೇರಿ, ಡಿ. 6: ಜಿಲ್ಲಾ ಪಂಚಾಯಿತಿ, ಮಡಿಕೇರಿ ತಾಲೂಕು ಕೃಷಿ ಇಲಾಖೆ, ನಾಪೆÇೀಕ್ಲು ನಾಲ್ನಾಡ್ ಪ್ಲಾಂಟರ್ಸ್ ಕ್ಲಬ್ನ ಸಂಯುಕ್ತ ಆಶ್ರಯದಲ್ಲಿ ನಾಲ್ನಾಡ್ ಪ್ಲಾಂಟರ್ಸ್ ಕ್ಲಬ್ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮದ ಸಂಭಾಂಗಣದ ಎರಡು ಕಡೆಗಳಲ್ಲಿ ಅಂಟಿಸಲಾದ ‘ಭತ್ತ ಬೆಳೆಯುವತ್ತ ರೈತನ ಚಿತ್ತ. ಇಲ್ಲದಿದ್ದರೆ ರೈತನ ಗದ್ದೆ ಸರ್ಕಾರದತ್ತ’ ಎಂಬ ನಾಮ ಫಲಕ ಹಲವಾರು ರೈತರನ್ನು ಬೆಚ್ಚಿ ಬೀಳಿಸಿದ ಪ್ರಸಂಗ ನಡೆಯಿತು. ಈ ಬಗ್ಗೆ ಕೃಷಿ ಅಧಿಕಾರಿಗಳನ್ನು ರೈತರು ಪ್ರಶ್ನಿಸಿದಾಗ ಇದು ಸರಕಾರದ ಆದೇಶ ಎಂಬ ಉತ್ತರವನ್ನು ಅಧಿಕಾರಿಗಳು ನೀಡಿದರು. ಇದಕ್ಕೆ ಸಂಬಂಧಿಸಿದಂತೆ `ಶಕ್ತಿ’ಯೊಂದಿಗೆ ತಮ್ಮ ಅಳಲು ತೋಡಿಕೊಂಡ ಹೆಸರು ಹೇಳಲು ಇಚ್ಚಿಸದ ಕೆಲ ರೈತರು, ಸರಕಾರ ರೈತರ ಗದ್ದೆಯನ್ನು ಕಬಳಿಸಲು ತಂತ್ರ ರೂಪಿಸುತ್ತಿದೆ. ಭತ್ತದ ಕೃಷಿಯಲ್ಲಿ ಲಾಭವಿಲ್ಲ ಎಂದು ಗೊತ್ತಿದ್ದರೂ ಯಾವದೇ ಪ್ರೋತ್ಸಾಹ ಧನ ನೀಡದೆ ಈಗ ಈ ರೀತಿ ಆಲೋಚಿಸಿರುವದು ಸರಿಯಾದ ಕ್ರಮವಲ್ಲ. ಜನಪ್ರತಿನಿಧಿಗಳು ಗಮನ ಹರಿಸಬೇಕು. ಇಲ್ಲದಿದ್ದರೆ ರೈತರು ತೊಂದರೆ ಅನುಭವಿಸಬೇಕಾಗುವದು ಎಂದು ಹೇಳಿದ್ದಾರೆ.
- ಪಿ.ವಿ. ಪ್ರಭಾಕರ್