ಶನಿವಾರಸಂತೆ, ಡಿ. 6: ಶನಿವಾರಸಂತೆಯಲ್ಲಿ ಬಹಳ ವರ್ಷಗಳ ಹಿಂದಿನಿಂದಲೂ ಶ್ರೀ ಬೀರಲಿಂಗೇಶ್ವರ ಹಾಗೂ ಶ್ರೀ ಪ್ರಬಲ ಭೈರವಿ ದೇವರುಗಳಿಗೆ ಪೂಜೆ ಪುನಸ್ಕಾರ ನಿಂತು ಹೋಗಿರುವದರಿಂದ ಹಲವಾರು ಸಾವು, ನೋವುಗಳು ಉಂಟಾಗಿರುವದರಿಂದ ಈ ಕುರಿತ ಸಾರ್ವಜನಿಕರು ಅಷ್ಟಮಂಗಳಾದ ಮೊರೆ ಹೋದಾಗ, ದೇವರುಗಳಿಗೆ ಪೂಜೆ ಪುನಸ್ಕಾರ ನಿಲ್ಲಿಸಿರುವ ಹಿನ್ನೆಲೆಯಲ್ಲಿ ಈ ರೀತಿ ತೊಂದರೆಗಳಾಗಲು ಕಾರಣ, ಆದ್ದರಿಂದ ಶ್ರೀ ಬೀರಲಿಂಗೇಶ್ವರ ಹಾಗೂ ಪ್ರಬಲ ಭೈರವಿ ದೇವಸ್ಥಾನವನ್ನು ಪುನರ್ ನಿರ್ಮಿಸಿ ಜೀರ್ಣೋದ್ಧಾರ ಮಾಡುವಂತೆ ತಂತ್ರಿಗಳು ಸಲಹೆ ನೀಡಿದ್ದರು.
ಅದರಂತೆ ಶನಿವಾರಸಂತೆಯ ಹಿಂದೂ, ಮುಸ್ಲಿಂ ಬಾಂಧವರು ಒಟ್ಟು ಸೇರಿ ದೇವರ ಕಾರ್ಯಕ್ಕೆ ವಂತಿಕೆ ಸಂಗ್ರಹಿಸಿ ಶ್ರೀ ಬೀರಲಿಂಗೇಶ್ವರ ಹಾಗೂ ಪ್ರಬಲ ಭೈರವಿ ಮತ್ತು ಪರಿವಾರ ದೇವರುಗಳ ಜೀರ್ಣೋದ್ಧಾರ ಮಹೋತ್ಸವ ತಾ. 5 ರಿಂದ 9ರವರೆಗೆ ತೀರ್ಮಾನಿಸಿದ್ದರು.
ಬುಧವಾರ ಬೆಳಿಗ್ಗೆ ಶನಿವಾರಸಂತೆಯ ಹಿಂದೂಗಳು ಮತ್ತು ಮುಸ್ಲಿಂ ಬಾಂಧವರು ಒಟ್ಟು ಸೇರಿ ಪಟ್ಟಣದ ಗಣಪತಿ ಪಾವಡಿ ಚಂದ್ರಮೌಳೇಶ್ವರ ದೇವಾಲಯ, ಬಿದರೂರು ಗ್ರಾಮ ಊರೊಡೆಯ ಬ್ರಹ್ಮದೇವರು, ಶ್ರೀ ಬಸವೇಶ್ವರ, ಹೆಮ್ಮನೆ ಗ್ರಾಮದ ಮಾರಮ್ಮದೇವಿ, ಶ್ರೀ ಬಸವೇಶ್ವರ ದೇವಸ್ಥಾನ, ತ್ಯಾಗರಾಜ ಕಾಲೋನಿಯ ಶ್ರೀ ವಿಜಯ ವಿನಾಯಕ ದೇವಸ್ಥಾನ ಹಾಗೂ ಚೌಡಮ್ಮನ ಬನ, ಮುಖ್ಯ ರಸ್ತೆಯಲ್ಲಿರುವ ಶ್ರೀ ರಾಮಮಂದಿರ ಹಾಗೂ ಜಾಮೀಯ ಮಸೀದಿ, ಜೀರ್ಣೋದ್ಧಾರ ಆಗುತ್ತಿರುವ ಶ್ರೀ ಬೀರಲಿಂಗೇಶ್ವರ ಮತ್ತು ಪ್ರಬಲ ಭೈರವಿ ಸನ್ನಿಧಿಯಲ್ಲಿ ಮಹಿಳೆಯರಾದಿಯಾಗಿ ಯುವಕರು ಮೋಟಾರ್ ಸೈಕಲ್ ಜಾಥಾದೊಂದಿಗೆ ಆಗಮಿಸಿ ವಿಶೇಷ ಪೂಜೆ, ಪ್ರಾರ್ಥನೆ, ಹೋಮ ಹವನ ನಡೆಸಿದರು.
ಶನಿವಾರಸಂತೆಯ ಎಲ್ಲಾ ದೇವಸ್ಥಾನಗಳಿಗೆ ಹಿಂದೂಗಳ ಜೊತೆ ಮುಸ್ಲಿಂ ಬಾಂಧವರು ಭೇಟಿ ನೀಡಿ ಪೂಜೆ ಪುನಸ್ಕಾರದಲ್ಲಿ ಭಾಗಿಯಾದಂತೆ ಪಟ್ಟಣದಲ್ಲಿರುವ ಜಾಮೀಯ ಮಸೀದಿಗೆ ಹಿಂದೂ ಪುರಷರು, ಮಹಿಳೆಯರು, ಮುಸ್ಲಿಂ ಬಾಂಧವರೊಂದಿಗೆ ಭೇಟಿ ನೀಡಿದಾಗ ಮುಸ್ಲಿಂ ಬಾಂಧವರು ಹಿಂದೂ ಬಾಂಧವರಿಗೆ ಪುಷ್ಪಾರ್ಚನೆ ಹಾಗೂ ಪನ್ನೀರು ಹಾಕುವ ಮೂಲಕ ಬರಮಾಡಿಕೊಂಡರು. ಹಿಂದೂಗಳು ಮುಸ್ಲಿಂ ಧಾರ್ಮಿಕ ಪ್ರಾರ್ಥನೆಯಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿ ಗಣಪತಿ ದೇವಾಲಯದ ಮುಖ್ಯ ಅರ್ಚಕರುಗಳಾದ ಶೇಷಾಚಲ ಮಹಾಂತೇಶ್ ಮತ್ತು ಇಸ್ಲಾಂ ಧರ್ಮ ಗುರುಗಳಾದ ತಾಸೀಕ್ ಝಾಕಿನ್ ಸಾಹುದ್ ಅಲ್ಲಾಮ್ ಅವರುಗಳು ಸರ್ವಧರ್ಮ ಬಾಂದವರಿಗೆ ಒಳಿತು ಮಾಡುವ ಸಂದೇಶ ಸಾರಿದರು. ಜೀರ್ಣೋದ್ಧಾರ ಮಹೋತ್ಸವದ ಅಂಗವಾಗಿ ದೇವಾಲಯ ಸಮಿತಿ ಮತ್ತು ಮಸೀದಿ ಸಮಿತಿಯಿಂದ ಪ್ರಸಾದ ವಿನಿಯೋಗ ನಡೆಯಿತು. ಈ ಸಂದರ್ಭ ಹಿಂದೂ ಹಾಗೂ ಮುಸ್ಲಿಂ ಪ್ರಮುಖರಾದ ಶರತ್ ಶೇಖರ್, ದಿವಾಕರ್, ಅರವಿಂದ್, ರವಿ, ರಂಗಸ್ವಾಮಿ, ಮಹಮ್ಮದ್ ಗೌಸ್, ಸರ್ದಾರ್ ಅಹಮ್ಮದ್, ಅಕ್ಮಲ್, ಸಮೀರ್, ವಿವಿಧ ದೇವಾಲಯ ಸಮಿತಿ ಪದಾಧಿಕಾರಿಗಳು, ಮಸೀದಿ ಸಮಿತಿ ಪದಾಧಿಕಾರಿಗಳು, ಭಕ್ತರು ಪಾಲ್ಗೊಂಡಿದ್ದರು.