ವೀರಾಜಪೇಟೆ, ಡಿ. 6: ಕಳೆದ ಐದು ದಿನಗಳಿಂದ ವೀರಾಜಪೇಟೆ ಮಿನಿ ವಿಧಾನಸೌಧದ ಮುಂದೆ ಧರಣಿ ಮುಷ್ಕರ ನಡೆಸುತ್ತಿದ್ದ ದಲಿತ ಸಂಘಟನೆಯ ಕಾರ್ಯಕರ್ತರು ನಿವೇಶನ ರಹಿತರು ಕಾರ್ಮಿಕರು ಉಸ್ತುವಾರಿ ಸಚಿವರೊಂದಿಗೆ ಮೊಬೈಲ್‍ನಲ್ಲಿ ಮಾತುಕತೆ ನಡೆಸಿದ ನಂತರ ವೀರಾಜಪೇಟೆಗೆ ಸಮೀಪದ ಹೆಗ್ಗಳ ಗ್ರಾಮದ ರಾಮನಗರದ ಬಳಿ ಗಿರಿಜನ ಅಭಿವೃದ್ಧಿ ಯೋಜನೆಗಾಗಿ (ಐಟಿಡಿಪಿ) ಮೀಸಲಿರಿಸಿದ್ದ ಸರ್ವೆ ನಂ. 307ರ ಜಾಗದಲ್ಲಿ ಸುಮಾರು 70 ಮಂದಿ ಶೆಡ್ ನಿರ್ಮಿಸಿ ರಾತ್ರಿ ಅಲ್ಲಿಯೇ ಉಳಿದಿದ್ದಾರೆ.
ಶೆಡ್ ನಿರ್ಮಾಣ ಕಾನೂನು ಬಾಹಿರವಾಗಿದ್ದು ತಕ್ಷಣ ತೆರವುಗೊಳಿಸುವಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಂಘಟನೆಯ ಮುಖಂಡರುಗಳಿಗೆ ಒತ್ತಾಯಿಸಿದ್ದಾರೆ. ಇಲ್ಲಿನ ಪ್ರವಾಸಿ ಮಂದಿರದಲ್ಲಿ ತಾಲೂಕು ತಹಶೀಲ್ದಾರ್ ಗೋವಿಂದರಾಜು, ಪ್ರಬಾರ ತಹಶೀಲ್ದಾರ್ ಬಸವರಾರಜು, ಗಿರಿಜನಾಭಿವೃದ್ಧಿ ಯೋಜನೆಯ ಜಿಲ್ಲಾ ಅಧಿಕಾರಿ ಶಿವಕುಮಾರ್ ಉಪ ವಿಭಾಗಾಧಿಕಾರಿ ಜವರೇಗೌಡ, ಡಿ.ವೈಎಸ್‍ಪಿ ನಾಗಪ್ಪ ಹಾಗೂ ಸಂಘಟನೆಯ ಮುಖಂಡರುಗಳ ನಡುವೆ ಸಂಧಾನದ ಮಾತುಕತೆ ನಡೆದು ಅಧಿಕಾರಿಗಳು ಶೆಡ್‍ಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ. ಗಿರಿಜನರಿಗಾಗಿ ಮೀಸಲಿರಿಸಿರುವ ಜಾಗದಲ್ಲಿ ತಾತ್ಕಾಲಿವಾಗಿ ಶೆಡ್ ನಿರ್ಮಾಣ ಮಾಡಿ ತಂಗಲು ವ್ಯವಸ್ಥೆ ಮಾಡಿಕೊಂಡಿರುವದು ಕಾನೂನು ಬಾಹಿರ. ಮೀಸಲಿರಿಸಿದ ಜಾಗಕ್ಕೆ ಅತಿ ಕ್ರಮಿಸಿದವರ ಮೇಲೆ ಅಪರಾಧ ಪ್ರಕರಣ ದಾಖಲಿಸಬಹುದು ಎಂದು ಅಧಿಕಾರಿಗಳು ಸಂಘಟನೆಯ ಮುಖಂಡರ ಮೇಲೆ ಒತ್ತಡ ಹೇರಿದ ಮೇರೆ ಉಸ್ತುವಾರಿ ಸಚಿವರು ಮಡಿಕೇರಿಗೆ ಭೇಟಿ ನೀಡಿ ಸಂಘಟನೆಯ ಮುಖಂಡರನ್ನು ಭೇಟಿ ಮಾಡಿ ನಿವೇಶನದ ಹಕ್ಕುಪತ್ರ ನೀಡುವ ತನಕ ಮುಖಂಡರು ಅಧಿಕಾರಿಗಳಿಗೆ ಮೂರು ದಿನಗಳ ಕಾಲವಕಾಶ ನೀಡಿ ತಾತ್ಕಾಲಿಕವಾಗಿ ಕೆಲವು ಶೆಡ್‍ಗಳನ್ನು ತೆರವು ಮಾಡಿರುವದಾಗಿ ಸಂಘಟನೆಯ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ “ಶಕ್ತಿಗೆ ತಿಳಿಸಿದ್ದಾರೆ.
ಸಭೆಯಲ್ಲಿ ಹಾಜರಿದ್ದ ಡಿವೈಎಸ್‍ಪಿ ನಾಗಪ್ಪ ಅವರು ಸಂಘಟನೆಯ ರಾಜ್ಯ ಸಮಿತಿಯ ನಾಯಕರೊಂದಿಗೂ ವಿಚಾರ ವಿನಿಮಯ ಮಾಡಿ ಹಕ್ಕುಪತ್ರ ಅರ್ಹ ಫಲಾನುಭವಿಗಳಿಗೆ ವಿತರಿಸುವ ಕುರಿತು ಭರವಸೆ ನೀಡಿರುವದಾಗಿ ಪರಶುರಾಮ್ ತಿಳಿಸಿದ್ದಾರೆ. ಸಭೆಯಲ್ಲಿ ರಾಜ್ಯ ಸಮಿತಿಯ ಹೆಚ್.ಎಸ್. ಕೃಷ್ಣಪ್ಪ, ಜಿಲ್ಲಾ ಸಮಿತಿಯ ವಿ.ಆರ್. ರಜನಿಕಾಂತ್ ಮತ್ತಿತರರು ಹಾಜರಿದ್ದರು.